ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಷೇರು ಮಾರುಕಟ್ಟೆಯಲ್ಲಿ ಹರ್ಷದ ಹೊನಲು ಕಂಡು ಬಂತು. ಈ ಮೂಲಕ ಸೆನ್ಸೆಕ್ಸ್ ಮತ್ತು ನಿಫ್ಟಿ ತನ್ನ ಮೂರು ದಿನಗಳ ನಷ್ಟದ ಸರಣಿಯನ್ನು ಕೊನೆಗೊಳಿಸಿದವು. ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ 160 ಅಂಕಗಳ ಏರಿಕೆ ಕಂಡರೆ, ಮುಂಬೈ ಷೇರುಪೇಟೆ 496 ಅಂಕಗಳ ಏರಿಕೆ 71,683 ಅಂಕಗಳೊಂದಿಗೆ ವ್ಯವಹಾರ ಮುಗಿಸಿತು ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಬಹುತೇಕ ವಲಯಗಳ ಷೇರುಗಳು ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದ್ದವು. ಆದರೆ ಇಂದು ಹೆಚ್ಡಿಎಫ್ಸಿ ಸೇರಿದಂತೆ ಬಹುತೇಕ ಷೇರಗಳು ಹಾಗೂ ಎಲ್ಲಾ ವಲಯದ ಇಕ್ವಿಟಿಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ತೈಲ ಮತ್ತು ಅನಿಲ, ಲೋಹಗಳು ಮತ್ತು ಹಣಕಾಸು ಕ್ಷೇತ್ರದಲ್ಲಿ ಇಂದು ಭರ್ಜರಿ ಖರೀದಿ ಕಂಡುಬಂತು.
ವಾರಾಂತ್ಯದಲ್ಲಿ ಬಿಡುಗಡೆಯಾಗಲಿರುವ ರಿಲಯನ್ಸ್, ಎಚ್‌ಯುಎಲ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್‌ಗಳಂತಹ ಪ್ರಮುಖ ಸಂಸ್ಥೆಗಳು ಮೂರನೇ ತ್ರೈಮಾಸಿಕ ವರದಿಗಳು ಬಿಡುಗಡೆ ಆಗಲಿದ್ದು, ಸೋಮವಾರದ ವ್ಯವಹಾರದಲ್ಲಿ ಇವುಗಳ ಸ್ಥಿತಿಗತಿಗೊತ್ತಾಗಲಿದೆ. ಹೀಗಾಗಿ ಹೂಡಿಕೆದಾರರು ಹೆವಿವೇಟ್ ಷೇರುಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವುಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಬೊನಾಂಜಾ ಪೋರ್ಟ್‌ಫೋಲಿಯೊದ ಸಂಶೋಧನಾ ವಿಶ್ಲೇಷಕ ವೈಭವ್ ವಿದ್ವಾನಿ ಮಾತನಾಡಿ, ನಿಫ್ಟಿ ಸಕಾರಾತ್ಮಕ ಟಿಪ್ಪಣಿಯೊಂದಿಗೆ ದಿನದ ವ್ಯವಹಾರ ಮುಗಿಸಿದೆ. ಹೆಚ್ಚಿನ ವಲಯಗಳು ಇಂದು ಹಸಿರು ಬಣ್ಣದಲ್ಲಿ ಕೊನೆಗೊಂಡಿದ್ದು, ಹೂಡಿಕೆದಾರರಲ್ಲಿ ಸಂತಸವನ್ನು ಮೂಡಿಸಿದೆ. ನಿಫ್ಟಿ ಆಯಿಲ್ & ಗ್ಯಾಸ್ ಮತ್ತು ನಿಫ್ಟಿ ಇನ್ಫ್ರಾ ಸ್ಟಾಕ್ಗಳು ಕ್ರಮವಾಗಿ ಶೇ.1.66 ಮತ್ತು ಶೇ.1.61ರಷ್ಟು ಏರಿಕೆ ಕಂಡಿವೆ.
ಕಂಪನಿಗಳು ವರದಿ ಮಾಡಿದ ದೃಢವಾದ ಸಂಖ್ಯೆಗಳು ಮಾರುಕಟ್ಟೆಯಲ್ಲಿ ಆಶಾವಾದ ಹೆಚ್ಚಿಸಿವೆ. ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಡಿವಿಸ್ ಲ್ಯಾಬ್ ಮತ್ತು ಒಎನ್‌ಜಿಸಿ ನಿಫ್ಟಿ ಟಾಪ್ ಗೇನರ್‌ಗಳಾಗಿದ್ದರೆ, ಎನ್‌ಟಿಪಿಸಿ, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟ ಅನುಭವಿಸಿದವು.