ನವದೆಹಲಿ : ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 5ಜಿ ಸ್ಮಾರ್ಟ್ಫೋನ್ಗಳ ಪಾಲು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 77 ಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇಕಡಾ 49 ರಷ್ಟಿತ್ತು. ಇನ್ನು ಪ್ರಸಕ್ತ ತ್ರೈಮಾಸಿಕದಲ್ಲಿ 5ಜಿ ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟ ಬೆಲೆ ಶೇಕಡಾ 22 ರಷ್ಟು ಕುಸಿದು 293 ಡಾಲರ್ಗೆ (ಸುಮಾರು 24,000 ರೂ.) ತಲುಪಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸುಮಾರು 27 ಮಿಲಿಯನ್ 5ಜಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿವೆ.
ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿಯ ಪ್ರಕಾರ, ಭಾರತೀಯ ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 2024 ರ ಮೊದಲಾರ್ಧದಲ್ಲಿ 69 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರಾಟವಾಗಿವೆ. ಎರಡನೇ ತ್ರೈಮಾಸಿಕದಲ್ಲಿ 35 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು, ಶೇಕಡಾ 3.2 ರಷ್ಟು ಬೆಳವಣಿಗೆಯಾಗಿದೆ.
ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಹೆಚ್ಚಳವಾಗಿದ್ದರೂ, ಗ್ರಾಹಕರಿಂದ ಬೇಡಿಕೆ ಕುಸಿತವಾಗಿರುವುದು ಮತ್ತು ಹೆಚ್ಚುತ್ತಿರುವ ಸರಾಸರಿ ಮಾರಾಟ ಬೆಲೆಗಳ (ಎಎಸ್ಪಿಗಳು) ಕಾರಣದಿಂದ ವಾರ್ಷಿಕವಾಗಿ ಮಾರುಕಟ್ಟೆಯ ಚೇತರಿಕೆಗೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.
"ತ್ರೈಮಾಸಿಕದ ಮೊದಲಾರ್ಧದಲ್ಲಿ ಹಳೆಯ ದಾಸ್ತಾನು ಕ್ಲಿಯರೆನ್ಸ್ ಹೊರತಾಗಿ, ಕಂಪನಿಗಳು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ವಿಶೇಷವಾಗಿ ಮಧ್ಯ ಪ್ರೀಮಿಯಂ / ಪ್ರೀಮಿಯಂ ವಿಭಾಗದಲ್ಲಿ (ಹೆಚ್ಚಾಗಿ ಚೀನಾ ಮೂಲದ ಮಾರಾಟಗಾರರು) ಜುಲೈ ಮತ್ತು ಆಗಸ್ಟ್ನ ಮಾನ್ಸೂನ್ ಸೀಸನ್ ಗಾಗಿ ಹೊಸ ಸ್ಮಾರ್ಟ್ಪೋನ್ಗಳು ಮಾರುಕಟ್ಟೆಗೆ ಬಂದಿವೆ" ಎಂದು ಐಡಿಸಿ ಇಂಡಿಯಾದ ಡಿವೈಸ್ ರಿಸರ್ಚ್ ವಿಭಾಗದ ಹಿರಿಯ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಶಿ ಹೇಳಿದರು.
ಎಂಟ್ರಿ ಲೆವೆಲ್ (100 ಡಾಲರ್ಗಿಂತ ಕಡಿಮೆ ಬೆಲೆ) ಸ್ಮಾರ್ಟ್ಫೋನ್ಗಳ ಮಾರಾಟವು ಶೇಕಡಾ 36 ರಷ್ಟು ಇಳಿಕೆಯಾಗಿ ಇವುಗಳ ಪಾಲು ಶೇಕಡಾ 14 ಕ್ಕೆ ಕುಸಿದಿದೆ. ಇದು ಒಂದು ವರ್ಷದ ಹಿಂದೆ ಶೇಕಡಾ 22 ರಷ್ಟಿತ್ತು. ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ಮಾರಾಟದಲ್ಲಿ ಶಿಯೋಮಿ ಮುಂಚೂಣಿಯಲ್ಲಿದ್ದು, ಪೊಕೊ ಮತ್ತು ರಿಯಲ್ ಮಿ ನಂತರದ ಸ್ಥಾನಗಳಲ್ಲಿವೆ.
ಎಲ್ಲರಿಗೂ ಕೈಗೆಟುಕುವ ಬಜೆಟ್ನ ($ 100 ಗಿಂತ ಹೆಚ್ಚು ಮತ್ತು $ 200 ಗಿಂತ ಕಡಿಮೆ ಬೆಲೆಯವು) ಸ್ಮಾರ್ಟ್ಪೋನ್ಗಳ ಮಾರಾಟವು ಶೇಕಡಾ 8 ರಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ ಶಿಯೋಮಿ, ರಿಯಲ್ ಮಿ ಮತ್ತು ವಿವೋ ಟಾಪ್ 3 ಬ್ರ್ಯಾಂಡ್ ಗಳಾಗಿದ್ದು, ಒಟ್ಟಾರೆಯಾಗಿ ಶೇಕಡಾ 60 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.
ವರದಿಯ ಪ್ರಕಾರ, ಪ್ರೀಮಿಯಂ ವಿಭಾಗವು ಶೇಕಡಾ 2 ರಷ್ಟು ಪಾಲನ್ನು ಹೊಂದಿದ್ದು, ಸಂಖ್ಯೆಗಳ ಆಧಾರದಲ್ಲಿ ಇವುಗಳ ಮಾರಾಟ ಶೇಕಡಾ 37 ರಷ್ಟು ಕುಸಿದಿದೆ. ಐಫೋನ್ 13, ಗ್ಯಾಲಕ್ಸಿ ಎಸ್ 23 ಎಫ್ಇ, ಐಫೋನ್ 12 ಮತ್ತು ಒನ್ ಪ್ಲಸ್ 12 ಇವು ಸದ್ಯ ಮಾರುಕಟ್ಟೆಯಲ್ಲಿನ ಪ್ರಮುಖ ಪ್ರೀಮಿಯಂ ಸ್ಮಾರ್ಟ್ಫೋನ್ಗಳಾಗಿವೆ. ಇದರಲ್ಲಿ ಆ್ಯಪಲ್ನ ಪಾಲು ಪಾಲು ಶೇಕಡಾ 61 ಕ್ಕೆ ಏರಿದರೆ, ಸ್ಯಾಮ್ ಸಂಗ್ನ ಪಾಲು ಒಂದು ವರ್ಷದ ಹಿಂದೆ ಇದ್ದ ಶೇಕಡಾ 21 ರಿಂದ ಶೇಕಡಾ 24 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಹೌಸಿಂಗ್ ಫೈನಾನ್ಸ್ ಕಂಪನಿಗಳ ನಿಯಮ ಬಿಗಿಗೊಳಿಸಿದ ಆರ್ಬಿಐ: 2025ರಿಂದ ಹೊಸ ಮಾರ್ಗಸೂಚಿ ಅನ್ವಯ - Housing Finance Companies