ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವು ಕೇಂದ್ರ ಸರ್ಕಾರಕ್ಕೆ ಮತ್ತೊಂದು ಕಂತಿನ ಲಾಭಾಂಶವನ್ನು ಪಾವತಿಸಿದೆ. ಎಲ್ಐಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಮೊಹಾಂತಿ ಅವರು ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಂಪನಿಯ ಲಾಭಾಂಶದಲ್ಲಿ ಸರ್ಕಾರದ ಪಾಲಿನ 3,662.17 ಕೋಟಿ ರೂ.ಗಳ ಚೆಕ್ ಅನ್ನು ನೀಡಿದರು. ಹಣಕಾಸು ಸೇವೆಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಂ.ಪಿ. ತಂಗಿರಾಲಾ ಮತ್ತು ಹಿರಿಯ ಎಲ್ಐಸಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಲ್ಐಸಿ ಈ ಹಿಂದೆ ಮಾರ್ಚ್ 1 ರಂದು 2,441.45 ಕೋಟಿ ರೂ.ಗಳ ಮಧ್ಯಂತರ ಲಾಭಾಂಶವನ್ನು ಪಾವತಿಸಿತ್ತು. ಅಲ್ಲಿಗೆ 2023-24ನೇ ಸಾಲಿನಲ್ಲಿ ಎಲ್ಐಸಿ ಸರ್ಕಾರಕ್ಕೆ ಒಟ್ಟು 6,103.62 ರೂಪಾಯಿಗಳಷ್ಟು ಮೊತ್ತವನ್ನು ಲಾಭಾಂಶವಾಗಿ ಪಾವತಿಸಿದಂತಾಗಿದೆ.
ಎಲ್ಐಸಿ ಸ್ಥಾಪನೆಯಾಗಿ 68 ವರ್ಷಗಳನ್ನು ಪೂರೈಸುತ್ತಿದೆ ಮತ್ತು ಮಾರ್ಚ್ 31, 2024 ರ ಹೊತ್ತಿಗೆ 52.85 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತನ್ನು ಹೊಂದಿದೆ. ಐಆರ್ಡಿಎಐ ಅಂದಾಜಿನ ಪ್ರಕಾರ ಮೊದಲ ವರ್ಷದ ಪ್ರೀಮಿಯಂ ಆದಾಯದ ದೃಷ್ಟಿಯಿಂದ ಅಳೆಯಲಾದ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇಕಡಾ 64.02 ರಷ್ಟು ಪಾಲು ಹೊಂದಿರುವ ಎಲ್ಐಸಿ ವಿಮಾ ಮಾರುಕಟ್ಟೆಯ ದೈತ್ಯನಾಯಕನಾಗಿ ಮುಂದುವರೆದಿದೆ.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಎಲ್ಐಸಿಯ ಏಕೀಕೃತ ನಿವ್ವಳ ಲಾಭವು ಶೇಕಡಾ 9 ರಷ್ಟು ಏರಿಕೆಯಾಗಿ 10,544 ಕೋಟಿ ರೂ.ಗೆ ತಲುಪಿದೆ. ಕಂಪನಿಯ ನಿವ್ವಳ ಪ್ರೀಮಿಯಂ ಆದಾಯವು 2023-24ರ ಮೊದಲ ತ್ರೈಮಾಸಿಕದಲ್ಲಿ ಇದ್ದ 98,755 ಕೋಟಿ ರೂ.ಗೆ ಹೋಲಿಸಿದರೆ 2024-25ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 16 ರಷ್ಟು ಏರಿಕೆಯಾಗಿ 1.14 ಲಕ್ಷ ಕೋಟಿ ರೂ.ಗೆ ತಲುಪಿದೆ.
ಎಲ್ಐಸಿಯ ಹೊಸ ವ್ಯವಹಾರ ಪ್ರೀಮಿಯಂ ಆದಾಯ (ವೈಯಕ್ತಿಕ) ಶೇ.13.67ರಷ್ಟು ಏರಿಕೆಯಾಗಿ 11,892 ಕೋಟಿ ರೂ.ಗೆ ತಲುಪಿದೆ. ಒಟ್ಟಾರೆ ವಾರ್ಷಿಕ ಪ್ರೀಮಿಯಂ ಸಮಾನವು (ಎಪಿಇ) ಶೇಕಡಾ 21.28 ರಷ್ಟು ಏರಿಕೆಯಾಗಿ 11,560 ಕೋಟಿ ರೂ.ಗೆ ತಲುಪಿದೆ. ವೈಯಕ್ತಿಕ ವ್ಯವಹಾರೇತರ ಎಪಿಇ ಶೇಕಡಾ 166 ರಷ್ಟು ಏರಿಕೆಯಾಗಿ 1,615 ಕೋಟಿ ರೂ.ಗೆ ತಲುಪಿದೆ. ಗ್ರೂಪ್ ಬಿಸಿನೆಸ್ ಎಪಿಇ ಶೇ.34ರಷ್ಟು ಏರಿಕೆಯಾಗಿ 4,813 ಕೋಟಿ ರೂ.ಗೆ ತಲುಪಿದೆ.
ವೈಯಕ್ತಿಕ ವ್ಯವಹಾರದಲ್ಲಿ ಎಪಿಇ ಪಾಲು 2025ರ ಮೊದಲ ತ್ರೈಮಾಸಿಕದಲ್ಲಿ ಶೇ.24ರಷ್ಟಿದ್ದು, 2024ರ ಮೊದಲ ತ್ರೈಮಾಸಿಕದಲ್ಲಿ ಶೇ.10.22ರಷ್ಟಿತ್ತು. ಹೊಸ ವ್ಯವಹಾರದ ಮೌಲ್ಯವು ಶೇಕಡಾ 24 ರಷ್ಟು ಏರಿಕೆಯಾಗಿ 1,610 ಕೋಟಿ ರೂ.ಗೆ ತಲುಪಿದೆ, ನಿವ್ವಳ ಮಾರ್ಜಿನ್ 20 ಬಿಪಿಎಸ್ ನಿಂದ 14 ಪರ್ಸೆಂಟ್ ಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ಭಾರತದಲ್ಲಿದ್ದಾರೆ 334 ಶತಕೋಟ್ಯಧಿಪತಿಗಳು: ಮುಂಚೂಣಿಯಲ್ಲಿ ಅದಾನಿ, ಅಂಬಾನಿ - billionaires in India