ನವದೆಹಲಿ: ಭಾರತದ ಆರ್ಥಿಕತೆಯು 2025ರ ಹಣಕಾಸು ವರ್ಷದಲ್ಲಿ ಶೇಕಡಾ 7.8 ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಂಕಿ - ಅಂಶ ಕಚೇರಿ (ಎನ್ಎಸ್ಒ)ಯ ವರದಿಯಲ್ಲಿ 2024 ರ ಹಣಕಾಸು ವರ್ಷದಲ್ಲಿ ಶೇಕಡಾ 7.6 ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜು ಮಾಡಲಾಗಿದೆ. ಈ ಅಂದಾಜುಗಳನ್ನು ಉಲ್ಲೇಖಿಸಿದ ಅರ್ಥಶಾಸ್ತ್ರಜ್ಞೆ ಜಾಹ್ನವಿ ಪ್ರಭಾಕರ್, ದೃಢವಾದ ಸ್ಥೂಲ ಆರ್ಥಿಕ ಮೂಲ ವಿಷಯಗಳನ್ನು ಗಮನಿಸಿದರೆ, ಬಳಕೆ ಮತ್ತು ಹೂಡಿಕೆಯ ಬೆಳವಣಿಗೆಯು 2025 ರ ಹಣಕಾಸು ವರ್ಷದಲ್ಲಿ ಹೆಚ್ಚಾಗದಿದ್ದರೂ ಅದೇ ಮಟ್ಟದಲ್ಲಿ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಜಾಗತಿಕ ಆರ್ಥಿಕ ಪರಿಸ್ಥಿಗಳಲ್ಲಿನ ಕ್ರಮೇಣ ಸುಧಾರಣೆಯೊಂದಿಗೆ, ರಫ್ತುಗಳು ಗಮನಾರ್ಹವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಒಟ್ಟು ಮೌಲ್ಯವರ್ಧಿತ (ಜಿವಿಎ) ಬೆಳವಣಿಗೆಯನ್ನು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 6.7 ರಿಂದ ಶೇಕಡಾ 7.2 ಕ್ಕೆ ನಿರೀಕ್ಷಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.
"ಸಾಮಾನ್ಯ ಮಾನ್ಸೂನ್ ಇರಲಿದೆ ಎಂಬ ನಿರೀಕ್ಷೆಯಲ್ಲಿ ಕೃಷಿ ಕ್ಷೇತ್ರದ ಪುನರುಜ್ಜೀವನ ಈ ವರದಿ ತಯಾರಿಕೆಯ ಸಮಯದಲ್ಲಿ ಊಹಿಸಲಾಗಿದೆ. ಮೇಲಿನವುಗಳ ಆಧಾರದ ಮೇಲೆ, ಭಾರತೀಯ ಆರ್ಥಿಕತೆಯು 2025 ರ ಹಣಕಾಸು ವರ್ಷದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆ ದರವನ್ನು ಸಾಧಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಜಾಹ್ನವಿ ಪ್ರಭಾಕರ್ ಹೇಳಿದರು.
ಅಂದಾಜು ಪರಿಷ್ಕರಿಸಿದ ಮೂಡೀಸ್: ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ 2024 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಈ ಹಿಂದೆ ಅಂದಾಜಿಸಲಾದ ಶೇಕಡಾ 6.1 ರಿಂದ ಶೇಕಡಾ 6.8 ಕ್ಕೆ ಹೆಚ್ಚಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತವು ತನ್ನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 8.4 ಕ್ಕೆ ವರದಿ ಮಾಡಿದ ನಂತರ ಮೂಡೀಸ್ ತನ್ನ ಅಂದಾಜುಗಳನ್ನು ಪರಿಷ್ಕರಿಸಿದೆ.
ಸರ್ಕಾರದ ಬಂಡವಾಳ ವೆಚ್ಚ ಮತ್ತು ಬಲವಾದ ಉತ್ಪಾದನಾ ಚಟುವಟಿಕೆಯು 2023ರಲ್ಲಿ ದೃಢವಾದ ಬೆಳವಣಿಗೆಯ ಫಲಿತಾಂಶಗಳಿಗೆ ಅರ್ಥಪೂರ್ಣವಾದ ಕೊಡುಗೆ ನೀಡಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ. ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳು ಮಸುಕಾಗುತ್ತಿರುವುದರಿಂದ, ಭಾರತೀಯ ಆರ್ಥಿಕತೆಯು ಶೇಕಡಾ 6-7 ರಷ್ಟು ನೈಜ ಜಿಡಿಪಿ ಬೆಳವಣಿಗೆಯನ್ನು ಸಹಜವಾಗಿಯೇ ದಾಖಲಿಸಬೇಕು ಎಂದು ಅದು ಹೇಳಿದೆ.
ಇದನ್ನೂ ಓದಿ : ದೇಶದ ಕಲ್ಲಿದ್ದಲು ಉತ್ಪಾದನೆ ಶೇ 27ರಷ್ಟು ಏರಿಕೆ