ನವದೆಹಲಿ: ಕಳೆದೊಂದು ದಶಕದಿಂದ ವೈಮಾನಿಕ ವಲಯದಲ್ಲಿನ ಬೆಳವಣಿಗೆಯಿಂದ ಇದೀಗ ಭಾರತ ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ದೇಶೀಯ ವಿಮಾನ ಮಾರುಕಟ್ಟೆ ಹೊಂದಿರುವ ಕೀರ್ತಿಗೆ ಭಾಜನವಾಗಿದೆ. ಮೊದಲ ಎರಡು ಸ್ಥಳದಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇದೆ ಎಂದು ಒಎಜಿ ದತ್ತಾಂಶ ತಿಳಿಸಿದೆ
ಕಳೆದ 10 ವರ್ಷದ ಹಿಂದೆ ಭಾರತದ ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಹೊಂದಿತ್ತು. ಆದರೆ, ಇದೀಗ ದೇಶಿಯ ವಿಮಾನದ ಪ್ರಯಾಣಿಕರ ಸಂಖ್ಯೆ, ವಿಮಾನ ಹಾರಾಟ ಸೇವೆಗಳ ಸಾಮರ್ಥ್ಯದ ವಿಸ್ತರಣೆ ಹೆಚ್ಚಿದೆ. ಕಳೆದ 10 ವರ್ಷದಿಂದ ಭಾರತದ ದೇಶೀಯ ವೈಮಾನಿಕ ಸಾಮರ್ಥ್ಯವೂ ದುಪ್ಪಟ್ಟಾಗಿದೆ. 2014ರ ಏಪ್ರಿಲ್ನಲ್ಲಿ ಭಾರತ 7.9 ಮಿಲಿಯನ್ ಸೀಟ್ ಹೊಂದಿದ್ದರೆ, ಇದೀಗ ಏಪ್ರಿಲ್ 2024ರಲ್ಲಿ 15.5 ಮಿಲಿಯನ್ ಸೀಟುಗಳ ಸಾಮರ್ಥ್ಯ ಹೊಂದುವ ಮೂಲಕ ಬ್ರೆಜಿಲ್ (9.7 ಮಿಲಿಯನ್ ಏರ್ಲೈನ್ಸ್ ಸೀಟ್ಸ್) ಮತ್ತು ಇಂಡೋನೇಷ್ಯಾವನ್ನು (9.2 ಮಿಲಿಯನ್) ಹಿಂದಿಕ್ಕಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಭಾರತದ ಆಸನ ಸಾಮರ್ಥ್ಯ ಮಾತ್ರವಲ್ಲದೇ, ವಾರ್ಷಿಕ ಬೆಳವಣಿಗೆ ದರ ಕೂಡ ಕಳೆದೊಂದು ದಶಕದಲ್ಲಿ ಹೆಚ್ಚಿದೆ. ಕಳೆದೊಂದು ದಶಕದಿಂದ ಇಂಡಿಗೋ ಮತ್ತು ಏರ್ ಇಂಡಿಯಾ ತನ್ನ ಮಾರುಕಟ್ಟೆ ಮೌಲ್ಯವನ್ನು ದುಪ್ಪಟ್ಟು ಮಾಡಿಕೊಂಡಿವೆ. ಇಂಡಿಗೋ ವಿಮಾನ ಸಂಸ್ಥೆಯ ವಾರ್ಷಿಕ ಬೆಳವಣಿಗೆ ದರ 13.9 ರಷ್ಟಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ಒಟ್ಟಾರೆಯಾಗಿ ಸಾವಿರ ವಿಮಾನಗಳನ್ನು ಹೊಂದಿದ್ದು, ಇದರಲ್ಲಿ 10 ರಲ್ಲಿ 9 ದೇಶಿಯ ಆಸನಗಳನ್ನು ಹೊಂದಿದೆ.
ಒಎಜಿ ಪ್ರಕಾರ ಭಾರತದ ಕಡಿಮೆ ವೆಚ್ಚದ ವಿಮಾನ ಹಾರಾಟವು ದೇಶೀಯ ವಿಮಾನ ಹಾರಾಟ ಸಾಮರ್ಥ್ಯವನ್ನು 78.4ರಷ್ಟು ಹೆಚ್ಚಿಸಿದೆ. ಜೊತೆಗೆ ಪ್ರಾಯಾಣಿಕರ ಹೆಚ್ಚಿನ ಪ್ರಯಾಣದ ಹಿನ್ನಲೆ ವಿಮಾನ ಟ್ರಾಫಿಕ್ ಬೇಡಿಕೆ ಕೂಡಾ ಹೆಚ್ಚಾಗಿದ್ದು, ಏರ್ಲೈನ್ಸ್ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿವೆ. ಹಾಗೆಯೇ ವಿಮಾನ ನಿಲ್ದಾಣಗಳ ಸಂಖ್ಯೆ ಕೂಡ ಹೆಚ್ಚಿದೆ.
ಇತ್ತೀಚಿನ ದತ್ತಾಂಶದ ಪ್ರಕಾರ, ಕಳೆದ ವರ್ಷ ಜನವರಿಯಿಂದ ಮೇ ವರೆಗೆ 636.07 ಲಕ್ಷ ಪ್ರಯಾಣಿಕರು ದೇಶೀಯ ವಿಮಾನ ಹಾರಾಟ ನಡೆಸಿದರೆ, ಇದೇ ಅವಧಿಯಲ್ಲಿ 2024ರಲ್ಲಿ 661.42 ಲಕ್ಷ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. ಈ ಅಂಕಿ ಅಂಶವೂ ಭಾರತದಲ್ಲಿ ವೇಗವಾಗಿ ವೈಮಾನಿಕ ಉದ್ಯಮ ವಿಸ್ತರಣೆಯಾಗುತ್ತಿರುವುದು ಸೂಚಿಸಿದ್ದು, ಮುಂಬರುವ ವರ್ಷದಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸುವ ಕುರಿತು ಮುನ್ಸೂಚನೆ ನೀಡಿದೆ. (ಐಎಎನ್ಎಸ್)
ಇದನ್ನೂ ಓದಿ: ಡಿಜಿಸಿಎ ಬೇಸಿಗೆ ವೇಳಾಪಟ್ಟಿ: ವಾರಕ್ಕೆ 24,275 ದೇಶೀಯ ವಿಮಾನ ಸಂಚಾರ