ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿದ ಬೇಡಿಕೆ, ಅನುಕೂಲಕರ ಮುಂಗಾರು ಪರಿಸ್ಥಿತಿಗಳು ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಸರಕಾರ ಕೈಗೊಂಡ ಕ್ರಮಗಳ ಬೆಂಬಲದಿಂದ ದೇಶವು ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ ಎಂದು ವರದಿ ಹೇಳಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕವಾಗಿ ದ್ವಿಚಕ್ರ ವಾಹನಗಳ ಮಾರಾಟವು 2024 ರ ಮೊದಲಾರ್ಧದಲ್ಲಿ ಶೇಕಡಾ 4 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. ಭಾರತ, ಯುರೋಪ್, ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕಾಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಏರಿಕೆಯಾಗಿದ್ದರೆ, ಚೀನಾ ಮತ್ತು ಆಗ್ನೇಯ ಏಷ್ಯಾ (ಎಸ್ಇಎ)ಗಳಲ್ಲಿ ಕುಸಿತವಾಗಿದೆ.
"ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಈ ವರ್ಷದ ಮೊದಲಾರ್ಧದಲ್ಲಿ ಶೇಕಡಾ 22 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಉತ್ತಮ ಸಾಧನೆಯಿಂದಾಗಿ ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಲು ಭಾರತಕ್ಕೆ ಅವಕಾಶ ಮಾಡಿಕೊಟ್ಟಿದೆ" ಎಂದು ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್ ಹೇಳಿದರು.
ಭಾರತದಲ್ಲಿ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಬಲವಾದ ಎರಡಂಕಿ ಬೆಳವಣಿಗೆಯನ್ನು (ವರ್ಷದಿಂದ ವರ್ಷಕ್ಕೆ) ದಾಖಲಿಸಿದೆ.
ಚೀನಾದಲ್ಲಿ 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಗ್ರಾಹಕರು ದೈನಂದಿನ ಪ್ರಯಾಣಕ್ಕಾಗಿ ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳಿಗಿಂತ ಇ-ಬೈಸಿಕಲ್ಗಳನ್ನು ಹೆಚ್ಚಾಗಿ ಕೊಳ್ಳುತ್ತಿರುವುದರಿಂದ ಚೀನಾದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಎಲೆಕ್ಟ್ರಿಕ್ ವಿಭಾಗದಲ್ಲಿ ತಾತ್ಕಾಲಿಕ ಮಂದಗತಿ ಕಂಡು ಬಂದಿದೆ.
ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ, ವಿಯೆಟ್ನಾಂ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ಮಲೇಷ್ಯಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ದ್ವಿಚಕ್ರ ವಾಹನ ಮಾರಾಟ ಕುಸಿತವಾಗಿದೆ. ಟಾಪ್ -10 ಜಾಗತಿಕ ದ್ವಿಚಕ್ರ ವಾಹನ ತಯಾರಕರು 2024 ರ ಮೊದಲಾರ್ಧದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದಾರೆ.
ಜಾಗತಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಹೀರೋ ಮೋಟೊಕಾರ್ಪ್, ಯಮಹಾ, ಟಿವಿಎಸ್ ಮೋಟಾರ್ ಮತ್ತು ಯಡಿಯಾ ನಂತರದ ಸ್ಥಾನಗಳಲ್ಲಿವೆ.
ಟಾಪ್-10 ಬ್ರ್ಯಾಂಡ್ ಗಳಲ್ಲಿ ಟಿವಿಎಸ್ ಮೋಟಾರ್ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ (ಶೇಕಡಾ 25 ರಷ್ಟು ಏರಿಕೆ) ಆಗಿದ್ದರೆ, ಯಡಿಯಾ (ಶೇಕಡಾ 29 ರಷ್ಟು ಕಡಿಮೆ) ಐದನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ : ಮದ್ಯಪ್ರಿಯರಿಗೆ ಬಿಗ್ ಲಾಟರಿ: ಕೇವಲ 99 ರೂಗೆ ಯಾವುದೇ ಬ್ರಾಂಡ್ನ ಬಾಟಲಿಗಳು ಲಭ್ಯ; ಏನಿದು ಹೊಸ ನೀತಿ?