ನವದೆಹಲಿ: ಯುಎಸ್ ಮತ್ತು ಭಾರತದ ಮಾರುಕಟ್ಟೆಗಳಲ್ಲಿ ಪ್ರತಿಭಾವಂತ ಉದ್ಯೋಗಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಜಾಗತಿಕ ಉದ್ಯೋಗ ನೇಮಕಾತಿಗಳು ಏಪ್ರಿಲ್-ಜೂನ್ ಅವಧಿಯಲ್ಲಿ (ಕ್ಯೂ 2 - 2024) ಶೇಕಡಾ 7.3 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿವೆ ಎಂದು ವರದಿಯೊಂದು ಸೋಮವಾರ ತೋರಿಸಿದೆ.
ಕ್ಲೌಡ್, ಕೃತಕ ಬುದ್ಧಿಮತ್ತೆ (ಎಐ), ಬಿಗ್ ಡೇಟಾ, ಸೈಬರ್ ಸೆಕ್ಯುರಿಟಿ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ ಅತ್ಯಧಿಕ ನೇಮಕಾತಿಗಳು ನಡೆದಿದ್ದರೆ, ಆರ್ಟಿಎಕ್ಸ್, ಕಾರ್ಗಿಲ್ ಇಂಕ್, ಎಲ್ವಿಎಂಎಚ್, ಜೆಪಿ ಮೋರ್ಗಾನ್ ಚೇಸ್ ಅಂಡ್ ಕೋ ಮತ್ತು ಮ್ಯಾರಿಯಟ್ ಇಂಟರ್ ನ್ಯಾಷನಲ್ ಕಂಪನಿಗಳು ಈ ತ್ರೈಮಾಸಿಕದಲ್ಲಿ ಹೆಚ್ಚಿನ ನೇಮಕಾತಿ ಮಾಡಿಕೊಂಡಿವೆ ಎಂದು ಡೇಟಾ ಮತ್ತು ವಿಶ್ಲೇಷಣಾ ಕಂಪನಿ ಗ್ಲೋಬಲ್ ಡಾಟಾ ತಿಳಿಸಿದೆ.
ಗೂಗಲ್, ನೆಸ್ಲೆ, ಫೋರ್ಡ್ ಮೋಟಾರ್, ನೈಕ್, ಅಮೆಜಾನ್ ಮತ್ತು ವಾಲ್ಮಾರ್ಟ್ನಂತಹ ಪ್ರಮುಖ ಕಂಪನಿಗಳು ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ ಉದ್ಯೋಗ ಮಾರುಕಟ್ಟೆ ಮಾತ್ರ ನೇಮಕಾತಿಗಳಲ್ಲಿ ಸಕಾರಾತ್ಮಕವಾಗಿರುವುದು ವಿಶೇಷ. ಪ್ರಯಾಣ ಮತ್ತು ಪ್ರವಾಸೋದ್ಯಮ, ಆಹಾರ ಸೇವೆ ಮತ್ತು ಚಿಲ್ಲರೆ ವ್ಯಾಪಾರ ವಲಯಗಳಲ್ಲಿ ನೇಮಕಾತಿಗಳು ಗಮನಾರ್ಹವಾಗಿ ಹೆಚ್ಚಾಗಿವೆ ಎಂದು ವರದಿ ತಿಳಿಸಿದೆ.
ಗ್ಲೋಬಲ್ ಡಾಟಾದ ಬಿಸಿನೆಸ್ ಫಂಡಮೆಂಟಲ್ಸ್ ವಿಶ್ಲೇಷಕ ಶೆರ್ಲಾ ಶ್ರೀಪ್ರದಾ ಮಾತನಾಡಿ, ಕಂಪನಿಗಳು ಮಶೀನ್ ಲರ್ನಿಂಗ್ (ಎಂಎಲ್) ಹಾರ್ಡ್ವೇರ್ ಪ್ಲಾಟ್ಫಾರ್ಮ್ಗಳು, ಎಐ ತಂತ್ರಜ್ಞಾನ, ಸ್ಮಾರ್ಟ್ ರೊಬೊಟಿಕ್ಸ್ ಪ್ರಯೋಗ ಮತ್ತು ಎಐ ಸಾಮರ್ಥ್ಯಗಳಲ್ಲಿ ಅನುಭವ ಹೊಂದಿರುವ ಜನರನ್ನು ಹುಡುಕುತ್ತಿವೆ ಎಂದರು.
"ಏಪ್ರಿಲ್ 2023 ರಿಂದ ಜನರೇಟಿವ್ ಎಐ (ಜೆಎನ್ಎಐ) ಪ್ರತಿಭಾವಂತರಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. 2024 ರ ಎರಡನೇ ತ್ರೈಮಾಸಿಕದಲ್ಲಿ ಯುಎಸ್ ಮತ್ತು ಭಾರತಗಳಲ್ಲಿ ಈ ಪ್ರತಿಭಾವಂತರನ್ನು ಅತ್ಯಧಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ." ಎಂದು ಶ್ರೀಪ್ರದಾ ಹೇಳಿದರು.
ಬ್ಯಾಂಕಿಂಗ್ ಮತ್ತು ಪಾವತಿಗಳು, ವ್ಯವಹಾರ ಮತ್ತು ಗ್ರಾಹಕ ಸೇವಾ ವಿಭಾಗಗಳಲ್ಲಿ ಕೂಡ ಉದ್ಯೋಗ ನೇಮಕಾತಿಗಳು ಹೆಚ್ಚಾಗಿವೆ. ಎಐ ಪ್ಲಾಟ್ ಫಾರ್ಮ್ಗಳ ಜ್ಞಾನವು 2024 ರ ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳು ಬಯಸಿದ ಪ್ರಮುಖ ಕೌಶಲ್ಯಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಜುಲೈನಲ್ಲಿ ಭಾರತದಲ್ಲಿ ನೇಮಕಾತಿ ಚಟುವಟಿಕೆಯು ವಾರ್ಷಿಕವಾಗಿ ಶೇಕಡಾ 11 ರಷ್ಟು ಏರಿಕೆಯಾಗಿದೆ. ಚಿಲ್ಲರೆ ಮತ್ತು ಟೆಲಿಕಾಂ ಉದ್ಯೋಗಗಳು ಮುಂಚೂಣಿಯಲ್ಲಿವೆ ಎಂದು ಟ್ಯಾಲೆಂಟ್ ಪ್ಲಾಟ್ ಫಾರ್ಮ್ ಫೌಂಡಿಟ್ನ ಇತ್ತೀಚಿನ ವರದಿ ತಿಳಿಸಿದೆ.
ಇದನ್ನೂ ಓದಿ : ದಶಕದಲ್ಲಿ 5ರಿಂದ 21ಕ್ಕೇರಿದ ಮೆಟ್ರೊ ರೈಲು ನಗರಗಳ ಸಂಖ್ಯೆ: 700 ಕಿ.ಮೀ ಹೊಸ ಮಾರ್ಗ ನಿರ್ಮಾಣ - Metro Rail