ನ್ಯೂಯಾರ್ಕ್: ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಉದ್ಯಮಿ ಗೌತಮ್ ಅದಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೌರಶಕ್ತಿ ಯೋಜನೆಯ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ಮತ್ತು ಹೂಡಿಕೆದಾರರಿಗೆ ವಂಚನೆ ಮಾಡಿದ ಗಂಭೀರ ಆರೋಪಗಳಡಿ ಗೌತಮ್ ಅದಾನಿ, ಅಳಿಯ ಸಾಗರ್ ಅದಾನಿ ಮತ್ತಿತರರ ವಿರುದ್ಧ ಅಮೆರಿಕ ಪ್ರಾಸಿಕ್ಯೂಷನ್ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಭಾರತದ ಅಧಿಕಾರಿಗಳಿಗೆ 2020ರಿಂದ 2024ರ ಮಧ್ಯಭಾಗದಲ್ಲಿ $250 ಮಿಲಿಯನ್ಗೂ ಅಧಿಕ ಲಂಚ ನೀಡಿದ ಪ್ರಕರಣದಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಭಾಗಿಯಾಗಿದ್ದಾರೆ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.
ಈ ಮಾಹಿತಿಯನ್ನು ಅಮೆರಿಕದ ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಗೆ ಮರೆಮಾಚಿ ಶತಕೋಟಿ ಡಾಲರ್ ಹಣವನ್ನು ಅದಾನಿ ಗ್ರೂಪ್ ಸಂಗ್ರಹಿಸಿ ವಂಚಿಸಿದೆ ಎಂದು ದೂರಲಾಗಿದೆ. ಅಮೆರಿಕದ ಹೂಡಿಕೆದಾರರು ಮತ್ತು ಬ್ಯಾಂಕ್ಗಳಿಗೆ ಸಂಬಂಧಿಸಿದ ವಿದೇಶಿ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಯುಎಸ್ ಕಾನೂನಿನಲ್ಲಿ ಅವಕಾಶವಿದೆ ಎಂದು ಕೂಡಾ ಉಲ್ಲೇಖಿಸಿದೆ.
ಶತಕೋಟಿ ಡಾಲರ್ ಸೋಲಾರ್ ಯೋಜನೆಯ ಗುತ್ತಿಗೆ ಪಡೆಯಲು ಆರೋಪಿಗಳು ಭಾರತ ಸರ್ಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕ ಸಾಗರ ಅದಾನಿ, ಸಂಸ್ಥೆಯ ಮಾಜಿ ಸಿಇಒ ವಿನೀತ್ ಜೈನ್ ಅವರು ವಂಚನೆ, ವಂಚನೆ ಸಂಚು ಆರೋಪ ಮಾಡಲಾಗಿದೆ ಎಂದು ನ್ಯೂಯಾರ್ಕ್ನ ಈಸ್ಟರ್ನ್ ಜಿಲ್ಲೆಯ ಅಟಾರ್ನಿ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಅದಾನಿ ಗ್ರೂಪ್ ಪ್ರಕಟಣೆ: ನಮ್ಮ ಬೋರ್ಡ್ ಸದಸ್ಯರಾದ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ಅವರ ವಿರುದ್ಧ ಅಮೆರಿಕ ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಕ್ರಿಮಿನಲ್ ದೋಷಾರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಯುಎಸ್ಡಿ ಬಾಂಡ್ ಬಿಡುಗಡೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ ಎಂದು ಅಮೆರಿಕ ಕೋರ್ಟ್ ಆದೇಶದ ಬೆನ್ನಲ್ಲೇ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಪ್ರಕಟಣೆ ಹೊರಡಿಸಿದೆ.
ಸೋಲಾರ್ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು ಭಾರತ ಸರ್ಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ. ಜೊತೆಗೆ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ, ಸತ್ಯ ಮರೆಮಾಚಲು ಯತ್ನಿಸಿದ್ದಾರೆ ಎಂದು ಅದಾನಿ ವಿರುದ್ಧ ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.
ಈ ಮೊದಲು ಅದಾನಿ ಗ್ರೂಪ್ ವಿರುದ್ಧ ಷೇರು ಮಾರುಕಟ್ಟೆಯಲ್ಲಿ ದರ ತಿರುಚುವಿಕೆ ವಿರುದ್ಧ ಹಿಂಡನ್ಬರ್ಗ್ ಗಂಭೀರ ಆರೋಪ ಮಾಡಿತ್ತು. ಇದು ಭಾರಿ ವಿವಾದಕ್ಕೆ ಗುರಿಯಾಗಿ, ಅದಾನಿ ಷೇರುಗಳು ದಿಢೀರ್ ಕೆಳಕ್ಕೆ ಬಿದ್ದಿದ್ದವು.
ಇದನ್ನೂ ಓದಿ: ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ: ಅಂಬಾನಿ ನಂ.1, 2ನೇ ಸ್ಥಾನದಲ್ಲಿ ಅದಾನಿ