ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ ಪಿಐ) ಅಕ್ಟೋಬರ್ನಲ್ಲಿ ಭಾರತದಲ್ಲಿ 94,017 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಸತತ ನಾಲ್ಕು ತಿಂಗಳುಗಳವರೆಗೆ ಷೇರುಗಳನ್ನು ಖರೀದಿ ಮಾಡಿದ್ದ ಅವರು ಅಕ್ಟೋಬರ್ನಲ್ಲಿ ಭಾರತದಲ್ಲಿ ನಿವ್ವಳ ಮಾರಾಟಗಾರರಾಗಿದ್ದಾರೆ. ಅಕ್ಟೋಬರ್ನಲ್ಲಿ ಅವರು ಭಾರತದಲ್ಲಿ ಮಾರಾಟ ಮಾಡಿದ ಒಟ್ಟು ಸ್ಟಾಕ್ಗಳು ಒಂದು ತಿಂಗಳ ಅವಧಿಯಲ್ಲಿಯೇ ಅತಿ ಹೆಚ್ಚು ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಡೇಟಾ ತೋರಿಸಿದೆ.
ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಎಫ್ಪಿಐಗಳು ಕ್ರಮವಾಗಿ 26,565 ಕೋಟಿ, 32,365 ಕೋಟಿ, 7,320 ಕೋಟಿ ಮತ್ತು 57,724 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಎಫ್ಪಿಐ ಸತತವಾಗಿ ಷೇರುಗಳನ್ನು ಖರೀದಿಸಿದ್ದರಿಂದ ಭಾರತದ ಷೇರು ಸೂಚ್ಯಂಕಗಳು ಹಲವಾರು ಬಾರಿ ದಾಖಲೆಯ ಗರಿಷ್ಠ ಮಟ್ಟಕ್ಕೇರಿದ್ದವು.
ಗರಿಷ್ಠ ಮಟ್ಟದಿಂದ ಕೆಳಗಿಳಿದ ಸೆನ್ಸೆಕ್ಸ್: ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ 85,978 ಪಾಯಿಂಟ್ ಗಳಿಂದ ಈಗ 79,724 ಪಾಯಿಂಟ್ ಗಳಿಗೆ ಇಳಿದಿದೆ. ಇತ್ತೀಚಿನ ವಹಿವಾಟುಗಳಲ್ಲಿ ಸೂಚ್ಯಂಕಗಳು ಮಂದಗತಿಯಲ್ಲಿವೆ. ನಿಧಿಯ ಹೊರಹರಿವು ಮತ್ತು ಎರಡನೇ ತ್ರೈಮಾಸಿಕದಲ್ಲಿ ಭಾರತದ ಕಂಪನಿಗಳು ನಿರೀಕ್ಷೆಗಿಂತ ಕಡಿಮೆ ಲಾಭ ತೋರಿಸಿರುವುದು ಇದಕ್ಕೆ ಕಾರಣವಾಗಿದೆ.
ಷೇರು ಮಾರುಕಟ್ಟೆಯಲ್ಲಿ ಮುಹೂರ್ತ ವಿಶೇಷ ವಹಿವಾಟು: ಶುಕ್ರವಾರ ಸಂಜೆಯ ಮುಹೂರ್ತ ವಿಶೇಷ ವಹಿವಾಟಿನಲ್ಲಿ, ಸೆನ್ಸೆಕ್ಸ್ ಶೇಕಡಾ 0.4 ರಷ್ಟು ಏರಿಕೆಯಾಗಿ 79,688 ಪಾಯಿಂಟ್ಗಳಲ್ಲಿ ಕೊನೆಗೊಂಡರೆ, ನಿಫ್ಟಿ ಶೇಕಡಾ 0.4 ರಷ್ಟು ಏರಿಕೆ ಕಂಡು 24,300 ಪಾಯಿಂಟ್ಗಳಲ್ಲಿ ಕೊನೆಗೊಂಡಿತು. ಎಲ್ಲಾ ವಲಯ ಸೂಚ್ಯಂಕಗಳು ಏರಿಕೆಯೊಂದಿಗೆ ಪ್ರಾರಂಭವಾದವು ಮತ್ತು ಮುಹೂರ್ತ ವ್ಯಾಪಾರದ ಸಮಯದಲ್ಲಿ ಮೇಲ್ಮುಖವಾಗಿ ಮುಂದುವರೆದವು. ನಿಫ್ಟಿ ಐಟಿ ಮಾತ್ರ ಶೇಕಡಾ 0.02 ರಷ್ಟು ಕಡಿಮೆಯಾಗಿದೆ.
ನವೆಂಬರ್ 15 ರಂದು ಷೇರು ಮಾರುಕಟ್ಟೆಗೆ ರಜೆ: ಗುರುನಾನಕ್ ಜಯಂತಿಯ ಅಂಗವಾಗಿ ನವೆಂಬರ್ 15ರ ಶುಕ್ರವಾರದಂದು ಷೇರು ಮಾರುಕಟ್ಟೆ ಬಂದ್ ಇರಲಿದೆ. ಹಾಗೆಯೇ ಕರೆನ್ಸಿ ಡೆರಿವೇಟಿವ್ಸ್ ವಿಭಾಗಗಳು, ಸರಕು ಉತ್ಪನ್ನ ವಿಭಾಗ ಮತ್ತು ಎಲೆಕ್ಟ್ರಾನಿಕ್ ಗೋಲ್ಡ್ ರಸೀದಿಗಳು (ಇಜಿಆರ್) ವಿಭಾಗವು ಆ ದಿನದ ಮಟ್ಟಿಗೆ ಮುಚ್ಚಲ್ಪಡುತ್ತವೆ. ಅಲ್ಲದೆ, ಈಕ್ವಿಟಿ ವಿಭಾಗ, ಈಕ್ವಿಟಿ ಡೆರಿವೇಟಿವ್ ಸೆಗ್ಮೆಂಟ್ ಮತ್ತು ಎಸ್ಎಲ್ ಬಿ ಸೆಗ್ಮೆಂಟ್ ಸಹ ಮುಚ್ಚಲ್ಪಡುತ್ತವೆ ಎಂದು ಬಿಎಸ್ಇ ವೆಬ್ ಸೈಟ್ ತಿಳಿಸಿದೆ.
ಇದನ್ನೂ ಓದಿ : ಅಕ್ಟೋಬರ್ನಲ್ಲಿ 1 ಲಕ್ಷ 40 ಸಾವಿರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ: ಶೇ 85ರಷ್ಟು ಹೆಚ್ಚಳ