ಮುಂಬೈ : ಭಾರತದ ವಿದೇಶಿ ವಿನಿಮಯ ಮೀಸಲು ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ 3.7 ಶತಕೋಟಿ ಡಾಲರ್ನಷ್ಟು ಏರಿಕೆಯಾಗಿ 641.59 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಶುಕ್ರವಾರ ಬಿಡುಗಡೆಯಾದ ಇತ್ತೀಚಿನ ಆರ್ಬಿಐ ಅಂಕಿ ಅಂಶಗಳು ತಿಳಿಸಿವೆ. ಇದು ಸುಮಾರು ಎರಡು ತಿಂಗಳಲ್ಲಿ ಅತ್ಯಧಿಕ ಏರಿಕೆಯಾಗಿದೆ ಮತ್ತು ಹಿಂದಿನ ಮೂರು ವಾರಗಳಿಂದ ಇದ್ದ ಕುಸಿತದ ಪ್ರವೃತ್ತಿಗೆ ಕಡಿವಾಣ ಬಿದ್ದಂತಾಗಿದೆ.
ಭಾರತದ ವಿದೇಶಿ ವಿನಿಮಯ ಮೀಸಲು ಏಪ್ರಿಲ್ನಲ್ಲಿ ಜೀವಮಾನದ ಗರಿಷ್ಠ 648.562 ಬಿಲಿಯನ್ ಡಾಲರ್ಗೆ ತಲುಪಿತ್ತು. ನಂತರ ಅದು ಸತತ ಮೂರು ವಾರಗಳವರೆಗೆ 10.6 ಬಿಲಿಯನ್ ಡಾಲರ್ಗಳಷ್ಟು ಕುಸಿದಿತ್ತು.
ದಾಖಲೆಯ ವಿದೇಶಿ ವಿನಿಮಯ ಸಂಗ್ರಹವು ಭಾರತೀಯ ಆರ್ಥಿಕತೆಯ ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.
ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲು ಆರ್ಥಿಕತೆಗೆ ಸಕಾರಾತ್ಮಕವಾಗಿದೆ. ವಿದೇಶಿ ವಿನಿಮಯ ಸಂಗ್ರಹ ಹೆಚ್ಛಾಗುವುದರಿಂದ ಡಾಲರ್ ಸಂಗ್ರಹ ಹೆಚ್ಚಾಗುತ್ತದೆ ಹಾಗೂ ಆ ಮೂಲಕ ರೂಪಾಯಿಯ ಮೌಲ್ಯ ಏರಿಕೆಯಾಗಲು ಸಹಾಯಕವಾಗುತ್ತದೆ. ವಿದೇಶಿ ವಿನಿಮಯ ಮೀಸಲುಗಳಲ್ಲಿನ ಹೆಚ್ಚಳವು ರೂಪಾಯಿಯು ಅಸ್ಥಿರವಾದಾಗ ಅದನ್ನು ಸ್ಥಿರಗೊಳಿಸಲು ಆರ್ಬಿಐಗೆ ಹೆಚ್ಚಿನ ಅವಕಾಶ ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾ ನಿವ್ವಳ ಲಾಭ ಏರಿಕೆ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ 2023-24ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 4,886 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಇದ್ದ 4,775 ಕೋಟಿ ರೂ.ಗಳಿಂದ ಶೇಕಡಾ 2.3 ರಷ್ಟು ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ತಲಾ 2 ರೂ ಮುಖಬೆಲೆಯ ಪ್ರತಿ ಷೇರಿಗೆ 7.60 ರೂ.ಗಳ ಲಾಭಾಂಶ ನೀಡಲು ಬ್ಯಾಂಕ್ ಶಿಫಾರಸು ಮಾಡಿದೆ. ಲಾಭಾಂಶ ಪಾವತಿಯ ಅರ್ಹತೆಗಾಗಿ ಜೂನ್ 28, 2024 ಅನ್ನು ದಾಖಲೆಯ ದಿನಾಂಕವಾಗಿ ನಿಗದಿಪಡಿಸಿದೆ.
ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇಕಡಾ 3.79 ರಷ್ಟಿದ್ದ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ (ಎನ್ಪಿಎ) ಒಟ್ಟು ಸಾಲಗಳ ಶೇಕಡಾ 2.92 ಕ್ಕೆ ಇಳಿದಿದೆ. ತ್ರೈಮಾಸಿಕದಲ್ಲಿ ನಿವ್ವಳ ಎನ್ಪಿಎಗಳು ಶೇಕಡಾ 0.68 ಕ್ಕೆ ಇಳಿದಿದೆ. ಇದು ಒಂದು ವರ್ಷದ ಹಿಂದೆ ಶೇಕಡಾ 0.89 ರಷ್ಟಿತ್ತು. ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು 11,793 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಆದಾಯ 11,525 ಕೋಟಿ ರೂ. ಆಗಿತ್ತು.