ನವದೆಹಲಿ: ಟ್ರಾವೆಲ್ ಏಜೆನ್ಸಿ ಕಂಪನಿಯಾಗಿರುವ ಈಸ್ ಮೈ ಟ್ರಿಪ್ ಅಯೋಧ್ಯೆ ಶ್ರೀ ರಾಮ ಮಂದಿರದ ಬಳಿ ಐಷಾರಾಮಿ ಪಂಚತಾರಾ ಹೋಟೆಲ್ ನಿರ್ಮಿಸುವುದಾಗಿ ಘೋಷಿಸಿದೆ. ಶ್ರೀರಾಮ ಮಂದಿರದಿಂದ ಸುಮಾರು 1 ಕಿ.ಮೀ ದೂರದಲ್ಲಿ ಹೋಟೆಲ್ ನಿರ್ಮಾಣ ಯೋಜನೆಗಾಗಿ ಜೀವನಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ನಲ್ಲಿ 100 ಕೋಟಿ ರೂ. ಹೂಡಿಕೆ ಮಾಡುವ ಪ್ರಸ್ತಾಪವನ್ನು ಕಂಪನಿಯ ನಿರ್ದೇಶಕರ ಮಂಡಳಿ ಅನುಮೋದಿಸಿದೆ. ಈ ಘೋಷಣೆಯ ನಂತರ ಕಂಪನಿಯ ಷೇರುಗಳು ಬಿಎಸ್ಇಯಲ್ಲಿ ಬೆಳಗಿನ ವಹಿವಾಟಿನಲ್ಲಿ ಶೇಕಡಾ 5.6 ರಷ್ಟು ಏರಿಕೆಯಾಗಿ 53.7 ರೂ.ಗೆ ತಲುಪಿವೆ.
"ಅಯೋಧ್ಯೆಯಲ್ಲಿ ಪೂಜ್ಯ ಶ್ರೀರಾಮ ಮಂದಿರದಿಂದ 1 ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಐಷಾರಾಮಿ 5-ಸ್ಟಾರ್ ಹೋಟೆಲ್ ನಿರ್ಮಿಸುವ ಮೂಲಕ ಆತಿಥ್ಯ ಕ್ಷೇತ್ರಕ್ಕೆ ಪ್ರವೇಶಿಸುವ ಪ್ರಸ್ತಾಪಕ್ಕೆ ನಾವು ಹಸಿರು ನಿಶಾನೆ ತೋರಿದ್ದೇವೆ. ಇದಕ್ಕಾಗಿ ಜೀವನಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ನಲ್ಲಿ 100 ಕೋಟಿ ರೂ. ಹೂಡಿಕೆ ಮಾಡಲಾಗುವುದು" ಎಂದು ಈಸ್ ಮೈ ಟ್ರಿಪ್ ಸಿಇಒ ಮತ್ತು ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಹೇಳಿದ್ದಾರೆ.
ಪವಿತ್ರ ಕ್ಷೇತ್ರ ಅಯೋಧ್ಯೆಗೆ ಪ್ರತಿವರ್ಷ ಸುಮಾರು 5 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ಈ ಪ್ರದೇಶ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಆರ್ಥಿಕ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ಅಯೋಧ್ಯಾ ನಗರದಲ್ಲಿ ಸುಮಾರು 17 ಹೋಟೆಲ್ ಗಳಿದ್ದು, ಸುಮಾರು 590 ಕೊಠಡಿಗಳಿವೆ. ಪ್ರವಾಸಿಗರ ಆಗಮನ ಹೆಚ್ಚಾಗುತ್ತಿರುವ ಮಧ್ಯೆ ಅವರ ಬೇಡಿಕೆಗಳನ್ನು ಪೂರೈಸಲು 73 ಹೊಸ ಹೋಟೆಲ್ಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ 40 ಈಗಾಗಲೇ ನಿರ್ಮಾಣ ಹಂತದಲ್ಲಿವೆ ಎಂದು ವರದಿ ತಿಳಿಸಿದೆ.
ಐಎಚ್ಸಿಎಲ್ (ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್), ಮ್ಯಾರಿಯಟ್ ಇಂಟರ್ ನ್ಯಾಷನಲ್, ವಿಂಧಮ್ ಮತ್ತು ಓಯೋ ರೂಮ್ಸ್ ಸೇರಿದಂತೆ ಹಲವಾರು ಪ್ರಸಿದ್ಧ ಹೋಟೆಲ್ ಮತ್ತು ಆತಿಥ್ಯ ಕಂಪನಿಗಳು ಅಯೋಧ್ಯೆಯಲ್ಲಿ ಮತ್ತಷ್ಟು ಹೋಟೆಲ್ಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿವೆ.
ಜನವರಿ 22 ರಂದು ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಅಯೋಧ್ಯೆಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಜನ ಆಗಮಿಸುತ್ತಿರುವುದು ವಿಶೇಷವಾಗಿದೆ. ಇದೀಗ ಮಂದಿರದ ನೆಲಮಹಡಿಯ ನಿರ್ಮಾಣ ಮಾತ್ರ ಪೂರ್ಣಗೊಂಡಿದ್ದು, 2024ರ ಡಿಸೆಂಬರ್ ವೇಳೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ಇತರ ಎರಡು ಮಹಡಿಗಳ ಕೆಲಸವನ್ನು ಪುನರಾರಂಭಿಸಲಾಗಿದೆ. ಈ ವರ್ಷದೊಳಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಸಮಿತಿ ಹೊಂದಿದೆ.
ಇದನ್ನೂ ಓದಿ : ಉದ್ಯೋಗಿಗಳಿಗೆ ಶುಭಸುದ್ದಿ: ಭವಿಷ್ಯ ನಿಧಿ ಬಡ್ಡಿ ದರ ಶೇಕಡಾ 8.25ಕ್ಕೆ ಹೆಚ್ಚಳ