ನವದೆಹಲಿ: ಭಾರತದಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಜುಲೈ ತಿಂಗಳಲ್ಲಿ ಶೇ 8.6ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿ 131.4 ಲಕ್ಷಕ್ಕೆ (1 ಕೋಟಿ 31 ಲಕ್ಷ) ತಲುಪಿದೆ ಮತ್ತು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಪ್ರಮಾಣ 121 ಲಕ್ಷದಷ್ಟಿತ್ತು ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಅಲ್ಲದೆ ದೇಶೀಯ ವಿಮಾನ ಸಂಚಾರವು 2019 ರ ಜುಲೈನಲ್ಲಿ ಇದ್ದ ಕೋವಿಡ್ ಪೂರ್ವ ಮಟ್ಟವಾದ 119.1 ಲಕ್ಷಕ್ಕಿಂತ ಶೇಕಡಾ 10ರಷ್ಟು ಹೆಚ್ಚಾಗಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ವರದಿ ತಿಳಿಸಿದೆ.
ಏಪ್ರಿಲ್ನಿಂದ ಜುಲೈವರೆಗಿನ (ನಾಲ್ಕು ತಿಂಗಳ ಅವಧಿ) ಅವಧಿಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ 533.4 ಲಕ್ಷವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ (506.9 ಲಕ್ಷ) ಹೋಲಿಸಿದರೆ ಶೇಕಡಾ 5.2ರಷ್ಟು ಬೆಳವಣಿಗೆಯಾಗಿದೆ ಮತ್ತು 2020 ರ ಹಣಕಾಸು ವರ್ಷದ ಇದೇ ನಾಲ್ಕು ತಿಂಗಳ ಅವಧಿಯಲ್ಲಿನ ಕೋವಿಡ್ ಪೂರ್ವ ಮಟ್ಟವಾದ 471.1 ಲಕ್ಷಕ್ಕಿಂತ ಶೇಕಡಾ 13.2ರಷ್ಟು ಹೆಚ್ಚಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಭಾರತೀಯ ವಿಮಾನಯಾನ ಕಂಪನಿಯ ವಿಮಾನಗಳ ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಶೇಕಡಾ 16.7ರಷ್ಟು ಬೆಳವಣಿಗೆಯೊಂದಿಗೆ 80.5 ಲಕ್ಷಕ್ಕೆ ತಲುಪಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ನಿರಂತರ ಚೇತರಿಕೆ, ತುಲನಾತ್ಮಕವಾಗಿ ಸ್ಥಿರವಾದ ವೆಚ್ಚಗಳು ಮತ್ತು 2025ರ ಹಣಕಾಸು ವರ್ಷದಲ್ಲಿ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಗಳಿಂದಾಗಿ ಭಾರತೀಯ ವಾಯುಯಾನ ಉದ್ಯಮವು ಸ್ಥಿರವಾದ ಬೆಳವಣಿಗೆ ಸಾಧಿಸಲಿದೆ ಎಂದು ಐಸಿಆರ್ಎ ಹೇಳಿದೆ.
"ಹಣಕಾಸು ವರ್ಷ 2024ರಲ್ಲಿ ಕಂಡುಬಂದ ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿನ ವೇಗವು ಹಣಕಾಸು ವರ್ಷ 2025ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಆದಾಗ್ಯೂ ಪ್ರಸ್ತುತ ಮಟ್ಟದಿಂದ ಬೆಳವಣಿಗೆಯ ವೇಗವು ಸೀಮಿತವಾಗಿರಬಹುದು" ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
ಈ ವರ್ಷದ ಜುಲೈನಲ್ಲಿ ವಿಮಾನ ಹಾರಾಟದ ಸಂಖ್ಯೆಗಳು ಜುಲೈ 2023ಕ್ಕೆ ಹೋಲಿಸಿದರೆ ಶೇಕಡಾ 5.2ರಷ್ಟು ಹೆಚ್ಚಾಗಿದೆ (ಜುಲೈ 2023 ರಲ್ಲಿ 87,086 ನಿರ್ಗಮನಗಳಿಗೆ ಹೋಲಿಸಿದರೆ ಜುಲೈ 2024ರಲ್ಲಿ 91,632 ನಿರ್ಗಮನಗಳು). ಇದಲ್ಲದೆ, ಜುಲೈ 2024ರಲ್ಲಿ ನಿರ್ಗಮನಗಳ ಸಂಖ್ಯೆ ಅನುಕ್ರಮವಾಗಿ ಶೇಕಡಾ 0.2ರಷ್ಟು ಹೆಚ್ಚಾಗಿದೆ.
ಏಪ್ರಿಲ್ ತಿಂಗಳಲ್ಲಿ ಒಂದೇ ದಿನದಲ್ಲಿ ಅತ್ಯಧಿಕ 4,70,751 ಪ್ರಯಾಣಿಕರ ಸಂಚಾರ ದಾಖಲಾಗಿದ್ದು, ಹಿಂದಿನ ಐತಿಹಾಸಿಕ ಗರಿಷ್ಠಗಳನ್ನು ಮೀರಿದೆ. ಜುಲೈ 2024 ರಲ್ಲಿ ಸರಾಸರಿ ದೈನಂದಿನ ನಿರ್ಗಮನಗಳು 2,956 ಆಗಿದ್ದು, ಇದು ಜುಲೈ 2023ರಲ್ಲಿ ಸರಾಸರಿ ದೈನಂದಿನ ನಿರ್ಗಮನ 2,809ಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: 4 ತಿಂಗಳಲ್ಲಿ 2.6 ಲಕ್ಷ ಟನ್ ಈರುಳ್ಳಿ ರಫ್ತು: ಕೇಂದ್ರ ಸರ್ಕಾರ - India Onion Exports