ನವದೆಹಲಿ: ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೊರತಾಗಿಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಬುಧವಾರ ಸತತ ಮೂರನೇ ದಿನವೂ ಕುಸಿತ ಕಂಡಿವೆ. ಅಮೆರಿಕದಲ್ಲಿ ಹೆಚ್ಚಿನ ಹಣದುಬ್ಬರ ದರದಿಂದಾಗಿ ಅಮೆರಿಕ ಫೆಡರಲ್ ರಿಸರ್ವ್ ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿದರಗಳನ್ನು ಕಡಿಮೆ ಮಾಡುವ ನಿರೀಕ್ಷೆಗಳು ಹುಸಿಯಾಗಿರುವುದು ಕೂಡ ತೈಲ ಬೆಲೆಗಳ ಇಳಿಕೆಗೆ ಕಾರಣವಾಗಿದೆ.
ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ ಗೆ 82.28 ಡಾಲರ್ಗೆ ಇಳಿಕೆಯಾಗಿದ್ದು, ಕಳೆದ ವಾರದ ಕೊನೆಯಲ್ಲಿ ಬ್ಯಾರೆಲ್ಗೆ 84 ಡಾಲರ್ ದರ ಇತ್ತು. ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕ್ರೂಡ್ (ಡಬ್ಲ್ಯುಟಿಐ) ಫ್ಯೂಚರ್ಸ್ ಬುಧವಾರ 78.02 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಬೆಲೆಗಳು ಮತ್ತಷ್ಟು ಇಳಿಕೆಯಾಗಬಹುದು ಎಂಬುದರ ಸೂಚನೆಯಾಗಿದೆ.
ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ರಷ್ಟು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ತೈಲ ಬೆಲೆಗಳ ಕುಸಿತದಿಂದ ದೇಶದ ಆಮದು ಬಿಲ್ ಕಡಿಮೆಯಾಗಲಿದೆ ಮತ್ತು ಆ ಮೂಲಕ ರೂಪಾಯಿ ಮತ್ತಷ್ಟು ಬಲವಾಗಲಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಆ ದೇಶದಿಂದ ತೈಲ ಖರೀದಿಸದಂತೆ ಪಾಶ್ಚಿಮಾತ್ಯ ದೇಶಗಳು ವಿಶ್ವದ ಇತರ ದೇಶಗಳಿಗೆ ಒತ್ತಡ ಹೇರುತ್ತಿವೆ. ಆದಾಗ್ಯೂ ಭಾರತದ ತೈಲ ಕಂಪನಿಗಳು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಸರ್ಕಾರ ಅವಕಾಶ ನೀಡಿರುವುದು ಕೂಡ ದೇಶದ ತೈಲ ಆಮದು ಬಿಲ್ ಕಡಿತಗೊಳ್ಳಲು ಸಹಾಯಕವಾಗಿದೆ.
ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಇರಾಕ್ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ರಷ್ಯಾ ಈಗ ಭಾರತಕ್ಕೆ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ಪ್ರಸ್ತುತ ಭಾರತವು ರಷ್ಯಾದಿಂದ ಸಮುದ್ರ ಮಾರ್ಗದ ಮೂಲಕ ಅತಿ ಹೆಚ್ಚು ತೈಲ ಖರೀದಿಸುವ ದೇಶವಾಗಿದೆ. ಏಪ್ರಿಲ್ನಲ್ಲಿ ಭಾರತದ ಒಟ್ಟು ತೈಲ ಆಮದಿನ ಪೈಕಿ ಶೇಕಡಾ 38 ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸಲಾಗಿದೆ.
ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದನ್ನು ಮುಂದುವರಿಸುವ ಭಾರತದ ಕಾರ್ಯತಂತ್ರವು 2022-23ರ ಆರ್ಥಿಕ ವರ್ಷದ ಮೊದಲ 11 ತಿಂಗಳಲ್ಲಿ ದೇಶದ ತೈಲ ಆಮದು ಬಿಲ್ನಲ್ಲಿ ಸುಮಾರು 7.9 ಬಿಲಿಯನ್ ಡಾಲರ್ ಉಳಿತಾಯಕ್ಕೆ ಕಾರಣವಾಗಿದೆ ಮತ್ತು ಚಾಲ್ತಿ ಖಾತೆ ಕೊರತೆಯನ್ನು ಕಡಿಮೆ ಮಾಡಲು ದೇಶಕ್ಕೆ ಸಹಾಯ ಮಾಡಿದೆ.
ಮಾಸ್ಕೋ ವಿರುದ್ಧ ಪಾಶ್ಚಿಮಾತ್ಯ ನಿರ್ಬಂಧಗಳ ಹೊರತಾಗಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಷ್ಯಾದೊಂದಿಗಿನ ಸಂಬಂಧವನ್ನು ದೃಢವಾಗಿ ಮುಂದುವರಿಸುತ್ತಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರನಾಗಿರುವುದರಿಂದ, ರಷ್ಯಾದಿಂದ ತೈಲ ಖರೀದಿಯು ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡಿದೆ. ಅಲ್ಲದೇ ಇದು ಇತರ ದೇಶಗಳಿಗೂ ಪ್ರಯೋಜನವನ್ನು ನೀಡಿದೆ.
ಇದನ್ನೂ ಓದಿ : 5ಜಿ ನೆಟ್ವರ್ಕ್ ಲಭ್ಯತೆಯಿಂದ ಭಾರತದ ಜಿಡಿಪಿಗೆ $27 ಶತಕೋಟಿ ಆದಾಯ ಸಾಧ್ಯತೆ: GSMA - 5G Spectrum