ನವದೆಹಲಿ: ಜಲವಿದ್ಯುತ್ ಯೋಜನೆಗಳಿಗೆ (ಎಚ್‌ಇಪಿ) ಮೂಲಸೌಕರ್ಯ ಒದಗಿಸಲು ಒಟ್ಟು 12,461 ಕೋಟಿ ರೂ.ಗಳ ಬಜೆಟ್ ಬೆಂಬಲದ ಪರಿಷ್ಕೃತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಸುಮಾರು 31,350 ಮೆಗಾವ್ಯಾಟ್ ಸಂಚಿತ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದ ವಿದ್ಯುತ್ ಸಚಿವಾಲಯದ ಪರಿಷ್ಕೃತ ಯೋಜನೆಯನ್ನು ಹಣಕಾಸು ವರ್ಷ 2024-25ರಿಂದ ಹಣಕಾಸು ವರ್ಷ 2031-32ರ ಮಧ್ಯದಲ್ಲಿ ಜಾರಿಗೆ ತರಲಾಗುವುದು.
"ಈ ಪರಿಷ್ಕೃತ ಯೋಜನೆಯು ಜಲವಿದ್ಯುತ್ ಯೋಜನೆಗಳ ತ್ವರಿತ ಅಭಿವೃದ್ಧಿಗೆ ಸಹಾಯ ಮಾಡುತ್ತದೆ, ದೂರದ ಮತ್ತು ಗುಡ್ಡಗಾಡು ಯೋಜನಾ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುತ್ತದೆ ಮತ್ತು ಪರೋಕ್ಷ ಉದ್ಯೋಗಗಳ ಜೊತೆಗೆ ಸ್ಥಳೀಯ ಜನರಿಗೆ ಹೆಚ್ಚಿನ ಸಂಖ್ಯೆಯ ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ" ಎಂದು ಕ್ಯಾಬಿನೆಟ್ ಪ್ರಕಟಣೆ ತಿಳಿಸಿದೆ. ಅಲ್ಲದೆ ಇದು ಜಲವಿದ್ಯುತ್ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲಿದೆ ಮತ್ತು ಹೊಸ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಲು ಪ್ರೋತ್ಸಾಹಿಸುತ್ತದೆ.
ದುರ್ಗಮ ಸ್ಥಳಗಳು, ಗುಡ್ಡಗಾಡು ಪ್ರದೇಶಗಳು, ಮೂಲಸೌಕರ್ಯಗಳ ಕೊರತೆ ಮುಂತಾದ ಜಲವಿದ್ಯುತ್ ಅಭಿವೃದ್ಧಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹಲವಾರು ನೀತಿ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಜಲವಿದ್ಯುತ್ ವಲಯವನ್ನು ಉತ್ತೇಜಿಸಲು ಮತ್ತು ಹೆಚ್ಚು ಕಾರ್ಯಸಾಧ್ಯವಾಗಿಸಲು, ಕ್ಯಾಬಿನೆಟ್ ಮಾರ್ಚ್ 2019ರಲ್ಲಿ ಕೆಲ ಯೋಜನೆಗಳನ್ನು ಜಾರಿಗೊಳಿಸಿದೆ.
ದೊಡ್ಡ ಜಲವಿದ್ಯುತ್ ಯೋಜನೆಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳಾಗಿ ಘೋಷಿಸುವುದು, ಜಲ ವಿದ್ಯುತ್ ಖರೀದಿ ಬಾಧ್ಯತೆಗಳು (ಎಚ್ಪಿಒಗಳು), ಸುಂಕ ತರ್ಕಬದ್ಧಗೊಳಿಸುವ ಕ್ರಮಗಳನ್ನು ಕೈಗೊಳ್ಳುವುದು, ಸಂಗ್ರಹಣೆ ಎಚ್ಇಪಿಯಲ್ಲಿ ಪ್ರವಾಹ ನಿಯಂತ್ರಣಕ್ಕೆ ಬಜೆಟ್ ಬೆಂಬಲ ಮತ್ತು ಮೂಲಸೌಕರ್ಯಗಳ ನಿರ್ಮಾಣ ವೆಚ್ಚಕ್ಕೆ ಬಜೆಟ್ ಬೆಂಬಲ ನೀಡುವುದು, ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಇವು ಸರ್ಕಾರ ಘೋಷಿಸಿದ ಹೊಸ ಯೋಜನೆಗಳಾಗಿವೆ.
ಪಾರದರ್ಶಕ ಆಧಾರದ ಮೇಲೆ ಹಂಚಿಕೆಯಾದ ಖಾಸಗಿ ವಲಯದ ಯೋಜನೆಗಳು ಸೇರಿದಂತೆ 25 ಮೆಗಾವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಲ್ಲಾ ಜಲವಿದ್ಯುತ್ ಯೋಜನೆಗಳಿಗೆ ಈ ಯೋಜನೆ ಅನ್ವಯಿಸುತ್ತವೆ.
ಯೋಜನೆಯನ್ನು ಪಾರದರ್ಶಕ ಆಧಾರದ ಮೇಲೆ ಹಂಚಿಕೆ ಮಾಡಿದ್ದರೆ, ಕ್ಯಾಪ್ಟಿವ್/ಮರ್ಚೆಂಟ್ ಪಿಎಸ್‌ಪಿಗಳು ಸೇರಿದಂತೆ ಎಲ್ಲಾ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ (ಪಿಎಸ್‌ಪಿ) ಈ ಯೋಜನೆ ಅನ್ವಯಿಸುತ್ತದೆ. ಈ ಯೋಜನೆಯಡಿ ಸುಮಾರು 15,000 ಮೆಗಾವ್ಯಾಟ್ ಸಂಚಿತ ಪಿಎಸ್‌ಪಿ ಸಾಮರ್ಥ್ಯವನ್ನು ಬೆಂಬಲಿಸಲಾಗುವುದು ಎಂದು ಕ್ಯಾಬಿನೆಟ್ ತಿಳಿಸಿದೆ.
ಇದನ್ನೂ ಓದಿ: ಭಾರತೀಯ ಸ್ಟಾರ್ಟ್ಅಪ್ಗಳ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆ: ಭವಿಷ್ಯದ ದಾರಿ ಏನು? - Startups Funding