ಮುಂಬೈ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರದಂದು ಇಲ್ಲಿನ ಎನ್ಎಸ್ಇ ಮತ್ತು ಬಿಎಸ್ಇ ಷೇರು ಮಾರುಕಟ್ಟೆಗಳು ಬಂದ್ ಆಗಿರಲಿವೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ಇ) ಟ್ರೇಡಿಂಗ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ, ಎಸ್ಎಲ್ಬಿ ಮತ್ತು ಡೆರಿವೇಟಿವ್ಸ್ ಸೇರಿದಂತೆ ಮಾರುಕಟ್ಟೆಗಳ ಎಲ್ಲಾ ವಿಭಾಗಗಳು ಇಂದು ಮುಚ್ಚಲ್ಪಟ್ಟಿವೆ.
ಮುಂಬೈನಲ್ಲಿ ಸೋಮವಾರ ಐದನೇ ಹಂತದ ಮತದಾನ ನಡೆಯುತ್ತಿರುವುದರಿಂದ ಇಂದು ಷೇರು ಮಾರುಕಟ್ಟೆಗೆ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ. ಮಂಗಳವಾರ ವಹಿವಾಟು ಪುನರಾರಂಭಗೊಳ್ಳಲಿದೆ.
ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ಬೆಳಗಿನ ಅಧಿವೇಶನದಲ್ಲಿ ಮುಚ್ಚಲ್ಪಡುತ್ತದೆ, ಆದರೆ ಸಂಜೆಯ ವಹಿವಾಟಿನಲ್ಲಿ ಮತ್ತೆ ತೆರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಮುಂದಿನ ವಹಿವಾಟು ಮಂಗಳವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 3.30 ರವರೆಗೆ ನಡೆಯಲಿದೆ.
ಷೇರು ಮಾರುಕಟ್ಟೆಯಲ್ಲಿ ಜೂನ್ 17 ರಂದು ಬಕ್ರೀದ್ ಅಂಗವಾಗಿ ಮುಂದಿನ ವ್ಯಾಪಾರ ರಜಾದಿನವಾಗಿರಲಿದೆ. ಇದರ ನಂತರ, ಮೊಹರಂ ಕಾರಣ ಜುಲೈ 17, ಆಗಸ್ಟ್ 15, ಅಕ್ಟೋಬರ್ 2, ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ನವೆಂಬರ್ 15 ಮತ್ತು ಕ್ರಿಸ್ಮಸ್ ಕಾರಣದಿಂದ ಡಿಸೆಂಬರ್ 25 ರಂದು ಮಾರುಕಟ್ಟೆಯನ್ನು ಮುಚ್ಚಲಾಗುತ್ತದೆ.
ವಿಶೇಷ ವಹಿವಾಟು ಅಧಿವೇಶನದಿಂದಾಗಿ ಷೇರು ಮಾರುಕಟ್ಟೆ ಶನಿವಾರ ತೆರೆದಿತ್ತು. ಶನಿವಾರದಂದು ಸೆನ್ಸೆಕ್ಸ್ 88 ಪಾಯಿಂಟ್ ಅಥವಾ ಶೇಕಡಾ 0.12 ರಷ್ಟು ಏರಿಕೆ ಕಂಡು 74,005 ಪಾಯಿಂಟ್ಸ್ ತಲುಪಿದ್ದರೆ, ನಿಫ್ಟಿ 35 ಪಾಯಿಂಟ್ಸ್ ಅಥವಾ ಶೇಕಡಾ 0.16 ರಷ್ಟು ಏರಿಕೆ ಕಂಡು 22,502 ಪಾಯಿಂಟ್ಸ್ ತಲುಪಿದೆ.
ಶನಿವಾರ, ಭಾರತೀಯ ಷೇರುಗಳು ಪ್ರೈಮರಿ ಸೈಟ್ನಲ್ಲಿ ಬೆಳಿಗ್ಗೆ 9:15 ರಿಂದ 10 ರವರೆಗೆ (0345-0430 ಜಿಎಂಟಿ) ಮತ್ತು ವಿಪತ್ತು ಚೇತರಿಕೆ ಸೈಟ್ನಲ್ಲಿ (disaster recovery site) ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ (0600-0700 ಜಿಎಂಟಿ) ಎರಡು ವಿಶೇಷ ಅಧಿವೇಶನಗಳಲ್ಲಿ ವಹಿವಾಟು ನಡೆಸಿದವು. ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಪರೀಕ್ಷಿಸಲು ವಿಶೇಷ ವಹಿವಾಟು ನಡೆಸಲಾಯಿತು.
ಫೆಬ್ರವರಿ 24, 2021 ರಂದು ತಾಂತ್ರಿಕ ದೋಷದಿಂದಾಗಿ ವಹಿವಾಟು ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ ಷೇರು ಮಾರುಕಟ್ಟೆಗಳು ವಿಪತ್ತು ಚೇತರಿಕೆ ಸೈಟ್ಗೆ ಬದಲಾಗಲು ವಿಫಲವಾದವು. ಇದೇ ರೀತಿಯ ವಿಶೇಷ ವ್ಯಾಪಾರ ಅಧಿವೇಶನವನ್ನು ಈ ಹಿಂದೆ ಮಾರ್ಚ್ 2, 2024 ರಂದು ನಡೆಸಲಾಗಿತ್ತು.
ಇದನ್ನೂ ಓದಿ : ಕಳೆದ ವಾರ 23 ಕೋಟಿ ಡಾಲರ್ ಫಂಡಿಂಗ್ ಸಂಗ್ರಹಿಸಿದ 26 ಭಾರತೀಯ ಸ್ಟಾರ್ಟ್ಅಪ್ಗಳು - Startup Funding