ಭಾರತದ ಹೆಸರಾಂತ ಬಜಾಜ್ ಆಟೋ ಮೊಬೈಲ್ಸ್ ಕಂಪೆನಿ ಇದೀಗ ದ್ವಿಚಕ್ರ ವಾಹನ ವಿಭಾಗದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದೆ. ಶೀಘ್ರದಲ್ಲೇ ವಿಶ್ವದ ಮೊದಲ ಸಿಎನ್‌ಜಿ (ಗ್ಯಾಸ್) ಚಾಲಿತ ಮೋಟಾರ್‌ಸೈಕಲ್ (ಬೈಕ್) ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ರೆಡಿಯಾಗಿದೆ. ಇದರೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಕಂಪೆನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ಘೋಷಿಸಿದೆ.
ಬಿಡುಗಡೆ ಯಾವಾಗ?: ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಈ ಹೊಸ ಸಿಎನ್‌ಜಿ ಮೋಟಾರ್‌ಸೈಕಲ್ ಅನ್ನು ಜೂನ್ 2024ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಆದರೆ, ನೇರವಾಗಿ ಬಜಾಜ್ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಗೊಳಿಸದೇ, ಬಜಾಜ್ ಸಬ್ ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೈಕ್‌ನ ಬೆಲೆ ಎಷ್ಟು?: ಉತ್ತಮ ಮೈಲೇಜ್ ನೀಡುವ ಬೈಕ್ಗಳನ್ನು ಖರೀದಿಸಬೇಕೆಂಬ ನಿರೀಕ್ಷೆ ಹೊಂದಿರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಈ ಸಿಎನ್‌ಜಿ ಬೈಕ್ ವಿನ್ಯಾಸ ಮಾಡಿದೆ. ಆದರೆ ಬೈಕ್‌ನ ಬೆಲೆ ಪೆಟ್ರೋಲ್ ವೆರಿಯಂಟ್‌ಗಿಂತ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ, ಡ್ಯುಯಲ್ ಇಂಧನ ತಂತ್ರಜ್ಞಾನದಿಂದಾಗಿ ಇಂಧನ ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಇದರಲ್ಲಿ CNG ಮತ್ತು ಪೆಟ್ರೋಲ್ ಇಂಧನ ಆಯ್ಕೆಗಳನ್ನು ಒದಗಿಸಲಾಗಿದೆ. ವರದಿಗಳ ಪ್ರಕಾರ, ಬೈಕ್‌ನ ಅಂದಾಜು ಬೆಲೆ ₹80,000ಯಿಂದ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಉಳಿದಂತೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳಿಗಾಗಿ ಬಜಾಜ್ ಗ್ರೂಪ್ 5,000 ಕೋಟಿ ರೂಪಾಯಿ ವ್ಯಯಿಸಲಿದೆ ಎಂದು ಬಜಾಜ್ ಆಟೋ ಅಧ್ಯಕ್ಷ ನೀರಜ್ ಬಜಾಜ್ ಹೇಳಿದ್ದಾರೆ. ಇದರಿಂದ ಮುಂದಿನ 5 ವರ್ಷಗಳಲ್ಲಿ ಸುಮಾರು 2 ಕೋಟಿ ಯುವಕ-ಯುವತಿಯರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶ ದೊರೆಯಲಿದೆ ಎಂದಿದ್ದಾರೆ.
ಬಜಾಜ್ ಚಾರಿಟಿ ಕಾರ್ಯಕ್ರಮಗಳು: ಭಾರತದ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಬಜಾಜ್ ಕಂಪನಿಯು ತನ್ನ ಪ್ರಾರಂಭದಿಂದಲೂ ಅನೇಕ ಚಾರಿಟಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಲ್ಲಿ ವಿಶೇಷವಾಗಿ ಜಮ್ನಾಲಾಲ್ ಬಜಾಜ್ ಫೌಂಡೇಶನ್, ಜಾನಕಿದೇವಿ ಬಜಾಜ್ ಗ್ರಾಮ ವಿಕಾಸ ಸಂಸ್ಥೆ, ಕಮಲ್ ನಯನ್ ಬಜಾಜ್ ಆಸ್ಪತ್ರೆಗಳು ಅನೇಕ ದತ್ತಿ ಕಾರ್ಯಕ್ರಮಗಳನ್ನು ಮಾಡುತ್ತಿವೆ.
ಬಜಾಜ್ ಇಂಜಿನಿಯರಿಂಗ್ ಸ್ಕಿಲ್ಸ್ ಟ್ರೈನಿಂಗ್ (BEST) ಕೂಡ ಕಳೆದ ವರ್ಷ ಪ್ರಾರಂಭವಾಯಿತು. ಈ ಮೂಲಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಇದರಿಂದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ವಿಷಯಗಳು ಮತ್ತು ಕಾರ್ಖಾನೆಗಳಲ್ಲಿ ಪ್ರಾಯೋಗಿಕವಾಗಿ ನಡೆಯುವ ಉತ್ಪಾದನೆಯ ನಡುವಿನ ಅಂತರವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಉದ್ಯಮದ ಅಗತ್ಯಗಳಿಗೆ ಸೂಕ್ತವಾದ ಕೌಶಲ್ಯಗಳನ್ನು ಅವರು ಕಲಿಯಬಹುದು ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್ 10 ಅಗ್ಗದ ಕಾರುಗಳು - Cheapest Cars In India