ನವದೆಹಲಿ: ಭಾರತಕ್ಕೆ ಪರ್ಯಾಯ ಸಮುದ್ರ ವ್ಯಾಪಾರ ಮಾರ್ಗವನ್ನು ನೀಡಲು ಅರ್ಮೇನಿಯಾ ಮುಂದೆ ಬಂದಿದ್ದು, ಆ ಬಗ್ಗೆ ರೈಸಿನಾ ಸಮ್ಮೇಳನದಲ್ಲಿ ವಿಷಯ ಪ್ರಸ್ತಾಪವಾಗಿದೆ. ವಿಶೇಷವಾಗಿ ಯುರೋಪ್‌ನೊಂದಿಗೆ ಪರ್ಯಾಯ ಮಾರ್ಗ ಹಂಚಿಕೊಳ್ಳುವ ಮಾತನಾಡಿದೆ. ಈ ಬಗ್ಗೆ ಆ ದೇಶದ ಕಾರ್ಮಿಕ ಹಾಗೂ ಸಾಮಾಜಿಕ ವ್ಯವಹಾರಗಳ ಸಚಿವ ನರೆಕ್ ಈ ವಿಷಯವನ್ನು ದೆಹಲಿಯಲ್ಲಿ ನಡೆದ ರೈಸಿನಾ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದಾರೆ.
ಅರ್ಮೇನಿಯನ್ ಸರ್ಕಾರವು ಉತ್ತರ - ದಕ್ಷಿಣ ಸಾರಿಗೆ ಕಾರಿಡಾರ್ (INSTC), ಗಲ್ಫ್ ಕಪ್ಪು ಸಮುದ್ರ ಸಾರಿಗೆ ಮತ್ತು ಚಬಹಾರ್ ಬಂದರು ಅಭಿವೃದ್ಧಿಯಂತಹ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ಯೋಜನೆಗಳಲ್ಲಿ ತನ್ನ ಪಾಲುದಾರಿಕೆಯನ್ನು ರೂಪಿಸಲು ಬದ್ಧವಾಗಿದೆ ಎಂದು ಅವರು ಘೋಷಿಸಿದ್ದಾರೆ. ಇದು ಭಾರತ ಮತ್ತು ನಡುವಿನ ಸಹಯೋಗದ ಪ್ರಯತ್ನವಾಗಿದೆ ಎಂದು ಇರಾನ್ ಸಚಿವರೂ ಸಹ ಹೇಳಿದ್ದಾರೆ. ರೈಸಿನಾ ಸಮ್ಮೇಳನ ರಾಜಕೀಯ ಮತ್ತು ವಿಶ್ವ ಆರ್ಥಿಕ ವ್ಯವಹಾರಗಳ ಕುರಿತು ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಸಭೆ ಆಗಿದೆ. ಜಾಗತಿಕ ಸಮುದಾಯವು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಸಮ್ಮೇಳನದಲ್ಲಿ ಸಂವಾದ- ಚರ್ಚೆಗಳನ್ನು ನಡೆಸಲಾಗುತ್ತಿದೆ.
ಕೆಂಪು ಸಮುದ್ರದ ಮೇಲೆ ಹೌತಿ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರಸ್ತಾಪದ ಬಗ್ಗೆ ಮಾತನಾಡಿದ ಅರ್ಮೇನಿಯನ್ ಸಚಿವರು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಯುರೋಪ್ ಮತ್ತು ಪಶ್ಚಿಮದೊಂದಿಗೆ ವ್ಯಾಪಾರ ಮಾಡಲು ಪರ್ಯಾಯ ಸಮುದ್ರ ಮಾರ್ಗಗಳನ್ನು ಹುಡುಕುತ್ತಿವೆ. ಈ ಸಂದರ್ಭದಲ್ಲಿ ಈ ವಿಚಾರ ಮಹತ್ವವಾಗಿದೆ ಎಂದು ಹೇಳಿದರು. ಕೆಂಪು ಸಮುದ್ರದಂತಹ ಸಾಂಪ್ರದಾಯಿಕ ಮಾರ್ಗಗಳಲ್ಲಿ ಭದ್ರತಾ ದೃಷ್ಟಿಯಿಂದ ಪರ್ಯಾಯ ಸಮುದ್ರ ಮಾರ್ಗಗಳ ಹುಡುಕಾಟ ಈಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಅರ್ಮೆನಿಯನ್ ಸಚಿವರ ಈ ಪ್ರಸ್ತಾಪ ಭಾರಿ ಗಮನ ಸೆಳೆದಿದೆ.
ವ್ಯಾಪಾರ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಹಕಾರ ಸಂಬಂಧಿತ ಉನ್ನತ ಮಟ್ಟದ ಸಂವಾದಗಳ ಕುರಿತು ವಿದೇಶಾಂಗ ಕಚೇರಿ ಸಮಾಲೋಚನೆಗಳು ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಸಹಕಾರಿ ಆಗಿವೆ. ರೈಸಿನಾ ಸಮ್ಮೇಳನದಲ್ಲಿ ಭಾರತ ಮತ್ತು ಅರ್ಮೇನಿಯಾ ನಡುವಿನ ದ್ವಿಪಕ್ಷೀಯ ಸಂವಾದಗಳು ಮುಂದುವರೆದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರೈಸಿನಾ ಸಮ್ಮೇಳನದ ಒಂಬತ್ತನೇ ಆವೃತ್ತಿಯು ಬುಧವಾರದಿಂದ ನವದೆಹಲಿಯಲ್ಲಿ ಆರಂಭವಾಗಿದ್ದು, ಫೆಬ್ರವರಿ 23 ರಂದು ಮುಕ್ತಾಯಗೊಳ್ಳಲಿದೆ. ಈ ಕಾರ್ಯಕ್ರಮವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಥಿಂಕ್ ಟ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ. 9 ನೇ ರೈಸಿನಾ ಸಮ್ಮೇಳನದಲ್ಲಿ ಗ್ರೀಕ್ ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಮುಖ್ಯ ಅತಿಥಿಯಾಗಿದ್ದು, ಶೃಂಗದ ಮುಖ್ಯ ಭಾಷಣಕಾರರಾಗಿದ್ದಾರೆ.
100ಕ್ಕೂ ಹೆಚ್ಚು ರಾಷ್ಟ್ರಗಳ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮ, ತಂತ್ರಜ್ಞಾನ, ಹಣಕಾಸು ಮತ್ತು ಇತರ ವಲಯಗಳ ಪ್ರತಿನಿಧಿಗಳು ಈ ಈವೆಂಟ್‌ನಲ್ಲಿ ಭಾಗವಹಿಸಿದ್ದಾರೆ.
ಇದನ್ನು ಓದಿ: ನವದೆಹಲಿಯಲ್ಲಿ ಇಂದಿನಿಂದ ರೈಸಿನಾ ಸಮ್ಮೇಳನ: ವಿಶ್ವನಾಯಕರ ಆಗಮನ