ನವದೆಹಲಿ: ದೇಶದ ಪ್ರಮುಖ ಎಸ್ಯುವಿ ತಯಾರಕ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮಂಗಳವಾರ 9 ಆಸನಗಳ 'ಬೊಲೆರೊ ನಿಯೋ+' ಅನ್ನು ಅನಾವರಣಗೊಳಿಸಿದೆ. ಹೊಸ ಎಸ್ಯುವಿ ಪಿ 4 ಮತ್ತು ಪಿ 10 ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಕಂಪನಿಯ ಪ್ರಕಾರ, ಪಿ 4 ಎಂಟ್ರಿ ಲೆವೆಲ್ ಆಗಿದ್ದು, ಪಿ 10 ಹೆಚ್ಚು ಪ್ರೀಮಿಯಂ ಟ್ರಿಮ್ ಮಾದರಿಯಾಗಿದೆ. ಇದರ ಆರಂಭಿಕ ಬೆಲೆಯು (ಎಕ್ಸ್ ಶೋರೂಂ) 11.39 ಲಕ್ಷಗಳಾಗಿದೆ.
"ಬೊಲೆರೊ ನಿಯೋ+ ಬಿಡುಗಡೆಯೊಂದಿಗೆ ನಾವು ಬಾಳಿಕೆ, ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಆರಾಮದ ಭರವಸೆಯನ್ನು ನೀಡುತ್ತಿದ್ದೇವೆ. ಇದು ಪ್ರತಿ ಕುಟುಂಬ ಮತ್ತು ಫ್ಲೀಟ್ ಮಾಲೀಕರ ಚಾಲನಾ ಅನುಭವವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ" ಎಂದು ಮಹೀಂದ್ರಾ & ಮಹೀಂದ್ರಾ ಆಟೋಮೋಟಿವ್ ಸೆಕ್ಟರ್ ಸಿಇಒ ನಳಿನಿಕಾಂತ್ ಗೊಲ್ಲಗುಂಟಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ವಾಹನವು ಎಕ್ಸ್-ಆಕಾರದ ಬಂಪರ್ಗಳು, ಕ್ರೋಮ್ ಇನ್ಸರ್ಟ್ಗಳಿಂದ ಅಲಂಕರಿಸಲ್ಪಟ್ಟ ಮುಂಭಾಗದ ಗ್ರಿಲ್ ಮತ್ತು ಎಕ್ಸ್-ಆಕಾರದ ಸ್ಪೇರ್ ವೀಲ್ ಕವರ್ ನಂತಹ ಸಿಗ್ನೇಚರ್ ಬೊಲೆರೊ ವಿನ್ಯಾಸಗಳನ್ನು ಹೊಂದಿದೆ. ಬೊಲೆರೊ ನಿಯೋ+ 2.2-ಲೀಟರ್ ಎಂ ಹಾಕ್ ಡೀಸೆಲ್ ಎಂಜಿನ್ ಹೊಂದಿದ್ದು, ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆಗಾಗಿ ಮೈಕ್ರೋ-ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಇದು ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಡ್ಯುಯಲ್ ಏರ್ ಬ್ಯಾಗ್ಗಳು, ಚೈಲ್ಡ್ ಸೀಟ್ಗಳು, ಎಂಜಿನ್ ಇಮೊಬೈಲೈಸರ್ ಮತ್ತು ಆಟೋಮ್ಯಾಟಿಕ್ ಡೋರ್ ಲಾಕ್ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಇದಲ್ಲದೆ, ಹೊಸ ಎಸ್ ಯುವಿ 22.8 ಸೆಂ.ಮೀ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದ್ದು, ಬ್ಲೂಟೂತ್, ಯುಎಸ್ ಬಿ ಮತ್ತು ಆಕ್ಸ್ ಕನೆಕ್ಟಿವಿಟಿಗಳು ಇದರಲ್ಲಿವೆ. ಇದು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪವರ್ ವಿಂಡೋ, ಆರ್ಮ್ ರೆಸ್ಟ್ಗಳು ಮತ್ತು ವಿಶಾಲವಾದ ಬೂಟ್ ಸ್ಪೇಸ್ ಅನ್ನು ಸಹ ಹೊಂದಿದೆ.
ಮಹೀಂದ್ರಾ ಅಂಡ್ ಮಹೀಂದ್ರಾ ಇದು ಮಹೀಂದ್ರಾ ಗ್ರೂಪ್ನ ಪ್ರಮುಖ ಘಟಕವಾಗಿದೆ. ಸ್ಪೋರ್ಟ್ ಯುಟಿಲಿಟಿ ವಾಹನಗಳು, ಟ್ರಕ್ಗಳು ಮತ್ತು ಕೃಷಿ ಟ್ರಾಕ್ಟರುಗಳ ಪ್ರಮುಖ ಉತ್ಪಾದಕನಾಗಿರುವ ಕಂಪನಿಯು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಸ್ತಿತ್ವ ಹೊಂದಿದೆ. ಕಂಪನಿಯನ್ನು 1945 ರಲ್ಲಿ ಉಕ್ಕಿನ ವ್ಯಾಪಾರ ಕಂಪನಿಯಾಗಿ ಸ್ಥಾಪಿಸಲಾಯಿತು. ಇದನ್ನು ಜಗದೀಶ್ ಚಂದ್ರ ಮಹೀಂದ್ರಾ, ಅವರ ಸಹೋದರ ಕೈಲಾಶ್ ಚಂದ್ರ ಮಹೀಂದ್ರಾ, ಪಾಲುದಾರ ಗುಲಾಮ್ ಮೊಹಮ್ಮದ್ ಸೇರಿಕೊಂಡು ಮುಂಬೈನಲ್ಲಿ ಸ್ಥಾಪಿಸಿದರು. ಜಗದೀಶ್ ಚಂದ್ರ ಮಹೀಂದ್ರಾ ಅವರು ಪ್ರಸ್ತುತ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಅಜ್ಜ.
ಇದನ್ನೂ ಓದಿ : ಆತಂಕದ ಸುದ್ದಿ: ಶೇ 10ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಿದೆ ಟೆಸ್ಲಾ - TESLA