ನವದೆಹಲಿ: ಮೊಬೈಲ್ ಫೋನ್ಗಳ ಸಂಪರ್ಕ ವ್ಯವಸ್ಥೆಗೆ ಅಗತ್ಯವಾದ 5ಜಿ ಸ್ಪೆಕ್ಟ್ರಮ್ ಹರಾಜು ಬುಧವಾರ ಮುಕ್ತಾಯಗೊಂಡಿದ್ದು, ಟೆಲಿಕಾಂ ಸಂಸ್ಥೆಗಳಿಂದ ಸುಮಾರು 11,300 ರೂ.ಗಳ ಬಿಡ್ಗಳು ಸಲ್ಲಿಕೆಯಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 5ಜಿ ತರಂಗಾಂತರಗಳಿಗಾಗಿ 96,000 ಕೋಟಿ ರೂ.ಗಳ ಸ್ಪೆಕ್ಟ್ರಮ್ ಹರಾಜು ಮಂಗಳವಾರ ಪ್ರಾರಂಭವಾಗಿದ್ದು, ಇದು ಎಂಟು ಬ್ಯಾಂಡ್‌ಗಳನ್ನು ಒಳಗೊಂಡಿದೆ. ಒಟ್ಟು 10 ಗಿಗಾಹರ್ಟ್ಸ್ ರೇಡಿಯೋ ತರಂಗಗಳು ಖರೀದಿಗೆ ಲಭ್ಯವಿದ್ದು, ಇದು 800 ಮೆಗಾಹರ್ಟ್ಸ್‌ನಿಂದ 26 ಗಿಗಾಹರ್ಟ್ಸ್ ಆವರ್ತನಗಳನ್ನು (Frequencies) ಒಳಗೊಂಡಿದೆ.
ಏಳು ಸುತ್ತುಗಳಲ್ಲಿ ಮುಕ್ತಾಯಗೊಂಡ 96,000 ಕೋಟಿ ರೂ.ಗಳ 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್ ಅತಿದೊಡ್ಡ ಬಿಡ್ದಾರನಾಗಿ ಹೊರಹೊಮ್ಮಿದೆ. ಭಾರ್ತಿ ಏರ್‌ಟೆಲ್ 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಮತ್ತು 2100 ಮೆಗಾಹರ್ಟ್ಸ್ ಬ್ಯಾಂಡ್ಗಳಲ್ಲಿ ತರಂಗಾಂತರಗಳನ್ನು ಪಡೆದುಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಹರಾಜಿನಲ್ಲಿ ರಿಲಯನ್ಸ್ ಜಿಯೋ ಭಾಗವಹಿಸುವಿಕೆ ಸೀಮಿತವಾಗಿತ್ತು. ಜಿಯೋ ಬಹುಶಃ 1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ 5ಜಿ ಬ್ಯಾಂಡ್ ವಿಡ್ತ್ ಅನ್ನು ಖರೀದಿಸಬಹುದು. ವೊಡಾಫೋನ್ ಐಡಿಯಾ (ವಿ) 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಮತ್ತು 2500 ಮೆಗಾಹರ್ಟ್ಸ್ ಬ್ಯಾಂಡ್ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿದೆ ಎಂದು ತಿಳಿದು ಬಂದಿದೆ.
ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಈ ಹಿಂದೆ ಊಹಿಸಿದ್ದಂತೆಯೇ ಬಿಡ್ ಮಾಡಿವೆ. ಈ ವರ್ಷ ತಮ್ಮ ಪರವಾನಗಿಗಳ ಅವಧಿ ಮುಗಿಯುವ ಪ್ರದೇಶಗಳಲ್ಲಿ ಸ್ಪೆಕ್ಟ್ರಮ್ ಪಡೆಯಲು ಇವು ಮುಂದಾಗಿವೆ. ಹೆಚ್ಚುವರಿಯಾಗಿ, ಸುನಿಲ್ ಮಿತ್ತಲ್ ನೇತೃತ್ವದ ಏರ್‌ಟೆಲ್ ತನ್ನ ಸಬ್-ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಬಲಪಡಿಸಲು 900 ಮೆಗಾಹರ್ಟ್ಸ್ ತರಂಗಾಂತರಗಳನ್ನು ಸ್ವಾಧೀನಪಡಿಸಿಕೊಂಡಿದೆ.
ಏರ್‌ಟೆಲ್ ತನ್ನ ಮಿಡ್-ಬ್ಯಾಂಡ್ ಸ್ಪೆಕ್ಟ್ರಮ್ ಲಭ್ಯತೆಯನ್ನು ಹೆಚ್ಚಿಸಲು ಪ್ರಮುಖ ಮಾರುಕಟ್ಟೆಗಳಲ್ಲಿ 2100 ಮೆಗಾಹರ್ಟ್ಸ್ ತರಂಗಾಂತರಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾವಿಸಲಾಗಿದೆ. ದೇಶಾದ್ಯಂತ ತನ್ನ 5ಜಿ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ 4ಜಿ ನೆಟ್ವರ್ಕ್ಗಳನ್ನು ಸುಧಾರಿಸುವ ಗುರಿಯನ್ನು ಏರ್‌ಟೆಲ್ ಹೊಂದಿದೆ.
ತಕ್ಷಣದಲ್ಲಿಯೇ ಯಾವುದೇ ಸ್ಪೆಕ್ಟ್ರಮ್ಗಳ ಪರವಾನಗಿಗಳನ್ನು ನವೀಕರಿಸುವ ಅಗತ್ಯವಿಲ್ಲದ ಕಾರಣದಿಂದ ಜಿಯೋ ಬಿಡ್ಡಿಂಗ್ನಲ್ಲಿ ಸೀಮಿತವಾಗಿ ಭಾಗವಹಿಸಿತು. ಜಿಯೋ ತನ್ನ 4ಜಿ ಮತ್ತು 5ಜಿ ವ್ಯಾಪ್ತಿಯನ್ನು ಬೆಂಬಲಿಸಲು 1800 ಮೆಗಾಹರ್ಟ್ಸ್ ಬ್ಯಾಂಡ್ ನಲ್ಲಿ ಮಿಡ್-ಬ್ಯಾಂಡ್ 5ಜಿ ತರಂಗಾಂತರಗಳನ್ನು ಹೆಚ್ಚಿಸುವತ್ತ ಗಮನ ಹರಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ: ಏಪ್ರಿಲ್ನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ 1.1 ಲಕ್ಷ ಹೊಸ ನೌಕರರ ಸೇರ್ಪಡೆ - National Pension Scheme