ನವದೆಹಲಿ: ಆರಂಭಿಕ ಐಪಿಒಗೆ ಸಜ್ಜಾಗಿರುವ ಜೊಮಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿ ಕಳೆದ ಹಣಕಾಸು ವರ್ಷದಲ್ಲಿ (ಎಫ್ವೈ 24) 2,350 ಕೋಟಿ ರೂ.ಗಳ ನಿವ್ವಳ ನಷ್ಟ ದಾಖಲಿಸಿದೆ. ಕಂಪನಿಯ ನಿವ್ವಳ ನಷ್ಟ 2023 ರ ಹಣಕಾಸು ವರ್ಷದಲ್ಲಿ ಆಗಿದ್ದ 4,179 ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 44 ರಷ್ಟು ಕಡಿಮೆಯಾಗಿದೆ.
ಆದಾಗ್ಯೂ ಕಂಪನಿಯ ಆದಾಯವು ಹಿಂದಿನ ವರ್ಷದ 8,265 ಕೋಟಿ ರೂ.ಗಳಿಗೆ ಹೋಲಿಸಿದರೆ 2024 ರ ಹಣಕಾಸು ವರ್ಷದಲ್ಲಿ ಶೇಕಡಾ 36 ರಷ್ಟು ಏರಿಕೆಯಾಗಿ 11,247 ಕೋಟಿ ರೂ.ಗೆ ತಲುಪಿದೆ. ಸ್ವಿಗ್ಗಿಯ ಒಟ್ಟು ಆರ್ಡರ್ ಮೌಲ್ಯ (ಜಿಒವಿ) 4.2 ಬಿಲಿಯನ್ ಡಾಲರ್ ಆಗಿದ್ದು, ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು 14.3 ಮಿಲಿಯನ್ ಆಗಿದೆ. ಬಳಕೆದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ (ವೈಒವೈ) ಶೇಕಡಾ 26 ರಷ್ಟು ಹೆಚ್ಚಾಗಿದೆ.
ಕಂಪನಿಯ 2024 ನೇ ಹಣಕಾಸು ವರ್ಷದ ಹಣಕಾಸು ವರದಿಯ ಪ್ರಕಾರ, ಲಾಭದಾಯಕತೆಯು ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಸುಧಾರಿಸಿದೆ. ಇನ್ಸ್ಟಾಮಾರ್ಟ್ನಲ್ಲಿ ಅತ್ಯಧಿಕ ಹೂಡಿಕೆ ಮಾಡಲಾಗಿದ್ದು ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ ಎಂದು ಕಂನಿ ಹೇಳಿದೆ.
ಇದಕ್ಕೆ ಹೋಲಿಸಿದರೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (ಕ್ಯೂ 1 ಎಫ್ ವೈ 25) ಜೊಮಾಟೊದ ನಿವ್ವಳ ಲಾಭ ಶೇಕಡಾ 126 ರಷ್ಟು ಏರಿಕೆಯಾಗಿ 253 ಕೋಟಿ ರೂ.ಗೆ ತಲುಪಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ದೀಪಿಂದರ್ ಗೋಯಲ್ ನೇತೃತ್ವದ ಜೊಮ್ಯಾಟೊದ ಆದಾಯ ಶೇಕಡಾ 74 ರಷ್ಟು ಹೆಚ್ಚಾಗಿ (ವರ್ಷದಿಂದ ವರ್ಷಕ್ಕೆ) 4,206 ಕೋಟಿ ರೂ.ಗೆ ತಲುಪಿದೆ.
ಸ್ವಿಗ್ಗಿ ಈ ವರ್ಷದ ಕೊನೆಯಲ್ಲಿ ಐಪಿಒ ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗುವ ಸಾಧ್ಯತೆಯಿದೆ. 15 ಬಿಲಿಯನ್ ಡಾಲರ್ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು 1 ರಿಂದ 1.2 ಬಿಲಿಯನ್ ಡಾಲರ್ ಐಪಿಒಗೆ ಕಂಪನಿ ಕಣ್ಣಿಟ್ಟಿದೆ.
ಏತನ್ಮಧ್ಯೆ, ಭಾರತದಲ್ಲಿ ಆಹಾರ ಸೇವೆಗಳ ಮಾರುಕಟ್ಟೆಯು ಮುಂದಿನ ಏಳು ವರ್ಷಗಳಲ್ಲಿ ವಾರ್ಷಿಕವಾಗಿ ಶೇಕಡಾ 10 ರಿಂದ 12 ರಷ್ಟು ಬೆಳೆಯುವ ನಿರೀಕ್ಷೆಯಿದ್ದು, 2030 ರ ವೇಳೆಗೆ 9 ರಿಂದ 10 ಲಕ್ಷ ಕೋಟಿ ರೂ.ಗೆ ತಲುಪಲಿದೆ. ಹೊರಗಡೆ ಊಟ ಮಾಡುವ ಮತ್ತು ಹೊರಗಡೆಯಿಂದ ಆಹಾರ ಆರ್ಡರ್ ಮಾಡುವ ಭಾರತದ ಆಹಾರ ಸೇವೆಗಳ ಮಾರುಕಟ್ಟೆ ಪ್ರಸ್ತುತ 5.5 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ.
ಬೈನ್ & ಕಂಪನಿ ಮತ್ತು ಸ್ವಿಗ್ಗಿಯ ಇತ್ತೀಚಿನ ವರದಿಯ ಪ್ರಕಾರ, ಆನ್ ಲೈನ್ ಆಹಾರ ಡೆಲಿವರಿ ಮಾರುಕಟ್ಟೆಯು ಶೇಕಡಾ 18 ರಷ್ಟು ಸಿಎಜಿಆರ್ ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. ಇದು 2030 ರ ವೇಳೆಗೆ ಒಟ್ಟಾರೆ ಆಹಾರ ಸೇವೆಗಳ ಮಾರುಕಟ್ಟೆಗೆ ಶೇಕಡಾ 20 ರಷ್ಟು ಕೊಡುಗೆ ನೀಡಲಿದೆ. ಮಧ್ಯಮ ಮತ್ತು ಹೆಚ್ಚಿನ ಆದಾಯದ ಜನರಿಗೆ ಸೇವೆಗಳನ್ನು ನೀಡುತ್ತಿರುವ ಭಾರತೀಯ ಆಹಾರ ಸೇವಾ ಮಾರುಕಟ್ಟೆಯು ಪ್ರಸ್ತುತ 4-5 ಲಕ್ಷ ಕೋಟಿ ರೂ.ಗಳಿಂದ 2030 ರ ವೇಳೆಗೆ ಸುಮಾರು 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.