ಮುಜಾಫರ್‌ನಗರ(ಉತ್ತರ ಪ್ರದೇಶ): ಪ್ರೀತಿ ಅಂದ್ರೇನೆ ಹಾಗೆ. ಏನು ಬೇಕಾದರೂ ಮಾಡಿಸಿಬಿಡುತ್ತೆ. ಪ್ರೀತಿಸಿದವಳ(ನ)ನ್ನು ಏನೆಲ್ಲಾ ಲಾಗ ಹೊಡೆದಾದರೂ ದಕ್ಕಿಸಿಕೊಳ್ಳಬೇಕು ಎಂಬ ಹಠವಿರುತ್ತದೆ. ಇಂಥದ್ದನ್ನೆಲ್ಲಾ ನಾವು ಸಿನಿಮಾಗಳಲ್ಲೂ ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಪಾಗಲ್ಪ್ರೇಮಿ ಇದೆಲ್ಲ ಹಂತವನ್ನೂ ಮೀರಿದ ಕೆಲಸ ಮಾಡಿದ್ದಾನೆ. ತನ್ನ ಪ್ರೀತಿಯ ಹುಡುಗನಿಗೆ ಲಿಂಗ ಬದಲಾವಣೆಯನ್ನೇ ಮಾಡಿಸಿದ್ದಾನೆ!
ನಿಜ. ಈ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯ ಉಂಟಾದಾಗ ಆಸ್ಪತ್ರೆಗೆ ಕರೆದೊಯ್ದು ವೈದ್ಯರನ್ನು ಪುಸಲಾಯಿಸಿ ಯುವಕನಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾನೆ. ಇದರಿಂದ ಯುವಕನಾಗಿದ್ದವ ಬೆಳಗಾಗುವಷ್ಟರಲ್ಲಿ ಯುವತಿಯಾಗಿ ಬದಲಾಗಿದ್ದಾನೆ. ಈಗ ಆತನಿಗೆ ದಿಕ್ಕೇ ತೋಚದಂತಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಪ್ರಕರಣದ ಪೂರ್ಣ ವಿವರ: ಮುಜಾಫರ್‌ನಗರದ 20 ವರ್ಷದ ಯುವಕ ಓಂಪ್ರಕಾಶ್ ಮತ್ತು ಸಂತ್ರಸ್ತ ಯುವಕ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಸಂತ್ರಸ್ತ ಯುವಕ ಅನಾರೋಗ್ಯಕ್ಕೆ ತುತ್ತಾಗಿದ್ದ. ವೈದ್ಯಕೀಯ ತಪಾಸಣೆ ಮಾಡಿಸುವ ನೆಪದಲ್ಲಿ ಆತನನ್ನು ಓಂಪ್ರಕಾಶ್ ಜೂನ್ 3ರಂದು ಮನ್ಸೂರ್‌ಪುರದ ಬೇಗರಾಜ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ವೈದ್ಯರು ತಪಾಸಣೆಯ ಬಳಿಕ ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ತಿಳಿಸಿದ್ದಾರೆ. ಬಳಿಕ ಆತನಿಗೆ ಪ್ರಜ್ಞೆ ತಪ್ಪುವ ಮದ್ದು ನೀಡಿ ನೈಸರ್ಗಿಕ ಖಾಸಗಿ ಅಂಗಗಳನ್ನು ತೆಗೆದು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೆಲ್ಲವೂ ಆರೋಪಿ ಓಂಪ್ರಕಾಶ್ನ ನೇತೃತ್ವದಲ್ಲೇ ನಡೆದಿದೆಯಂತೆ.
ಶಸ್ತ್ರಚಿಕಿತ್ಸೆಯ ಬಳಿಕ ಮರುದಿನ ಯುವಕ ಎಚ್ಚರಗೊಂಡಾಗ ತನ್ನಲ್ಲಾದ ಬದಲಾವಣೆಯ ಬಗ್ಗೆ ಅರಿವಾಗಿದೆ. ಈ ಬಗ್ಗೆ ಓಂಪ್ರಕಾಶ್ನನ್ನು ಕೇಳಿದಾಗ, ಆತ "ನಿನ್ನನ್ನು ಇಷ್ಟಪಡುವೆ. ಮದುವೆಯಾಗಲೂ ಸಿದ್ಧನಿರುವೆ. ಹೀಗಾಗಿ ಲಿಂಗ ಬದಲಾವಣೆ ಮಾಡಿಸಿದ್ದೇನೆ" ಎಂದು ತಿಳಿಸಿದ್ದಾನೆ. ಇದನ್ನು ಕೇಳಿದ ಯುವಕನಿಗೆ ಸಿಡಿಲು ಬಡಿದಂತಾಗಿದೆ. ನಡೆದ ವೃತ್ತಾಂತವನ್ನು ಸಂತ್ರಸ್ತ ಯುವಕ ತನ್ನ ಪೋಷಕರಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಓಂಪ್ರಕಾಶ್ನನ್ನು ಬಂಧಿಸಲಾಗಿದೆ.
ಸಂತ್ರಸ್ತನ ಹೇಳಿಕೆ ಹೀಗಿದೆ: "ಆಸ್ಪತ್ರೆಗೆ ಕರೆತಂದ ಮರುದಿನವೇ ನನಗೆ ಶಸ್ತ್ರಚಿಕಿತ್ಸೆಯಾಯಿತು. ನನಗೆ ಪ್ರಜ್ಞೆ ಬಂದಾಗ ನಾನು ಹುಡುಗಿಯಾಗಿ ಮಾರ್ಪಟ್ಟಿದ್ದು ಗೊತ್ತಾಯಿತು. ಆಗ ಓಂಪ್ರಕಾಶ್ ಅಲ್ಲಿಗೆ ಬಂದು ನಾನೇ ಇದನ್ನೆಲ್ಲಾ ಮಾಡಿಸಿದೆ ಎಂದು ಹೇಳಿದ. ಜೀವನ ಪರ್ಯಂತ ನಾನು ನಿನ್ನ ಜೊತೆ ಇರುವೆ. ನಿನ್ನನ್ನು ಮದುವೆಯಾಗುವೆ. ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಇದಕ್ಕೆ ಒಪ್ಪದಿದ್ದರೆ ನಿನ್ನ ತಂದೆಯನ್ನು ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ. ಈಗಾಗಲೇ ನಮ್ಮ ಜಮೀನನ್ನೂ ಆತ ಕಿತ್ತುಕೊಂಡಿದ್ದಾನೆ" ಎಂದು ಸಂತ್ರಸ್ತ ಯುವಕ ಪೊಲೀಸರ ಬಳಿ ದೂರು ನೀಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಭಾರೀ ಕೋಲಾಹಲ ಉಂಟಾಗಿದೆ. ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಆರೋಪಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಹಾಗೂ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಿಂಗ ಬದಲಾವಣೆಯಿಂದ ಯುವಕ ದೈಹಿಕ ಮತ್ತು ಮಾನಸಿಕವಾಗಿ ನೊಂದಿದ್ದಾನೆ. ಆತನಿಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಾಂಬೆ ಐಐಟಿಯಲ್ಲಿ ಶ್ರೀರಾಮನ ಅಣಕಿಸಿ ನಾಟಕ ಪ್ರದರ್ಶನ: 8 ವಿದ್ಯಾರ್ಥಿಗಳಿಗೆ ₹1.2 ಲಕ್ಷದವರೆಗೆ ದಂಡ - IIT Bombay