ಕೋಯಿಕ್ಕೋಡ್(ಕೇರಳ): ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲು ಬೆತ್ತಲೆ ಪೂಜೆ ಮಾಡುವಂತೆ ಮಹಿಳೆಗೆ ಒತ್ತಾಯಿಸಿರುವ ಘಟನೆ ತಾಮರಸ್ಸೆರಿಯಲ್ಲಿ ನಡೆದಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಶಮೀರ್ ಮತ್ತು ಆತನ ಸ್ನೇಹಿತ ಪ್ರಕಾಶನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪತಿ ಶಮೀರ್ ಆಗಾಗ್ಗೆ ಮನೆಗೆ ಬಂದು ಪತ್ನಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ಮಹಿಳೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲೂ ಸಾಧ್ಯವಾಗದ ಆರ್ಥಿಕ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು. ಕೊನೆಗೆ ದೂರವಾಣಿ ಮೂಲಕ ಮಹಿಳೆ ತಾಮರಸ್ಸೆರಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ನಂತರ ಮಹಿಳಾ ಪೊಲೀಸ್ವೊಬ್ಬರು ಸಂತ್ರಸ್ತೆಯ ಮನೆಗೆ ಹೋಗಿ ದೂರು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆ ಕೊಟ್ಟ ದೂರಿನಲ್ಲೇನಿದೆ?: ಸಂತ್ರಸ್ತೆ ಪತಿಯ ಸ್ನೇಹಿತ ಪ್ರಕಾಶನ್, ಮಹಿಳೆಯ ದಯನೀಯ ಪರಿಸ್ಥಿತಿಯ ಲಾಭ ಪಡೆದುಕೊಂಡು, ತನ್ನನ್ನು ಪೂಜಾರಿ ಎಂದು ಪರಿಚಯಿಸಿಕೊಂಡು ನಿಮ್ಮ ಕುಟುಂಬದ ಸಮಸ್ಯೆ ಪರಿಹರಿಸುವುದಾಗಿ ಸಂತ್ರಸ್ತೆಗೆ ಫೋನ್ ಮೂಲಕ ಮೆಸೇಜ್ ಕಳುಹಿಸಿದ್ದಾನೆ. ನಂತರ ಸಂತ್ರಸ್ತೆಗೆ ಬೆತ್ತಲೆ ಪೂಜೆ ಮಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ, ತನ್ನ ಪತಿಯ ಮೂಲಕ ಬಲವಂತಪಡಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಂಧತ ಆರೋಪಿಗಳನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಕೌಟುಂಬಿಕ ಜಗಳ: ಪತ್ನಿಗೆ ಲೊಕೇಶನ್ ಕಳುಹಿಸಿ ನದಿಗೆ ಹಾರಿದ ಪತಿ! - Man Commits Suicide