ಲಕ್ನೋ (ಉತ್ತರ ಪ್ರದೇಶ): ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಬಡವರಿಗೆ ಉಚಿತವಾಗಿ 10 ಕೆಜಿ ಪಡಿತರ ವಿತರಣೆ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಬಡವರಿಗೆ ಐದು ಕೆಜಿ ಪಡಿತರ ನೀಡುವ ಮೋದಿ ಸರ್ಕಾರದ ಯೋಜನೆಯನ್ನು ಉಲ್ಲೇಖಿಸಿದರು. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಆದರೆ ನೀವು ಏನೂ ಮಾಡಲಿಲ್ಲ ಎಂದು ಮೋದಿ ಅವರು ಆರೋಪಿಸುತ್ತಿದ್ದಾರೆ. "ನೀವು ಐದು ಕೆಜಿ ನೀಡುತ್ತಿದ್ದೀರಿ, ಇಂಡಿಯಾ ಒಕ್ಕೂಟ ಸರ್ಕಾರ ರಚನೆಯಾದರೆ, ನಾವು ಬಡವರಿಗೆ 10 ಕೆಜಿ ಪಡಿತರ ನೀಡುತ್ತೇವೆ" ಎಂದರು.
ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ನಾವು ಈಗಾಗಲೇ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. 10 ಕೆಜಿ ಉಚಿತ ಪಡಿತರ ವಿತರಣೆ ಬಗ್ಗೆ ಗ್ಯಾರಂಟಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಸಂವಿಧಾನ ಬದಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದೆ. ಶ್ರೀರಾಮ, ಹಿಂದೂ-ಮುಸ್ಲಿಂ, ಪಾಕಿಸ್ತಾನ, ಹಿಂದೂಗಳಿಗೆ ಅಪಾಯವಿದೆ ಎಂದು ಹೇಳಿ ಮತ ಕೇಳುತ್ತಿದೆ. ಆದರೆ ದೇಶದ ಜನರು ಬಿಜೆಪಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಮ್ಮ ಹೋರಾಟ ಯೋಗಿ, ಮೋದಿಯವರೊಂದಿಗೆ ಅಲ್ಲ, ಎರಡು ಸಿದ್ಧಾಂತಗಳ ನಡುವಿನ ಹೋರಾಟ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಒಂದು ಸಿದ್ಧಾಂತವು ದೇಶವನ್ನು ಕೆಲವು ಕೈಗಾರಿಕೋದ್ಯಮಿಗಳ ಕೈಯಲ್ಲಿಟ್ಟು ಬಡ ಮತ್ತು ಮಧ್ಯಮ ವರ್ಗದವರನ್ನು ಗುಲಾಮರನ್ನಾಗಿ ಮಾಡಲು ಬಯಸುತ್ತದೆ. ಆದರೆ ನಮ್ಮದು ನೆಹರೂ, ಗಾಂಧಿ, ಪಟೇಲ್ ಅವರು ನಿರ್ಮಿಸಿದ ದೇಶವನ್ನು ಉಳಿಸುವುದು ಎಂದರು.
ಐದು ಗ್ಯಾರಂಟಿ ಜಾರಿ: ಮೋದಿ ಅವರು ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಬೇಕಾಗಿದ್ದನ್ನು ಸಹಾಯಹಸ್ತ ಚಾಚುತ್ತಾರೆ. ಆದರೆ ನಾವು ಬಡ ರೈತರಿಗೆ ಸಹಾಯ ಮಾಡುತ್ತೇವೆ. ರೈತರ ಸಾಲಮನ್ನಾ, ಯುವಕರಿಗೆ ಉದ್ಯೋಗ, ಒಂದು ವರ್ಷದಲ್ಲಿ ಮಹಿಳೆಯರ ಖಾತೆಗೆ ಒಂದು ಲಕ್ಷ ರೂಪಾಯಿ, ಮತ್ತು ನಿರುದ್ಯೋಗಿ ಯುವಕರಿಗೆ ಅಪ್ರೆಂಟಿಶಿಪ್ ಖಾತ್ರಿಪಡಿಸುವ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ತಿಳಿಸಿದರು.
ಇದನ್ನೂಓದಿ:ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಿದ್ದಂತೆ ಕಾಂಗ್ರೆಸ್ ಗಂಟು ಮೂಟೆ ಕಟ್ಟೋದು ಗ್ಯಾರಂಟಿ : ಆರ್ ಅಶೋಕ್ - R Ashok