ರಾಂಚಿ (ಜಾರ್ಖಂಡ್): ಜಾರ್ಖಂಡ್‌ನ ಸಿಎಂ ಆಗಿದ್ದ ಹೇಮಂತ ಸೊರೆನ್ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಹೇಮಂತ್ ನಿರ್ಧರಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಚಂಪೈ ಸೊರೆನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಈ ಚಂಪೈ ಸೊರೆನ್ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕರಾಗಿದ್ದಾರೆ.
ರಾಜ್ಯದಲ್ಲಿ ಜನಪ್ರಿಯ ನಾಯಕರೂ ಆಗಿದ್ದಾರೆ. 67 ವರ್ಷದ ಚಂಪೈ ಸೊರೆನ್ ಅವರು ಜಾರ್ಖಂಡ್‌ನ ಸೆರೈಕೆಲಾ ಖಾರ್ಸಾವನ್ ಜಿಲ್ಲೆಯ ಸೆರೈಕೆಲಾ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ. ಚಂಪೈ ಸೊರೆನ್ ಅವರು ಶಿಬು ಸೊರೆನ್ ಸ್ಥಾಪಿಸಿದ ಜೆಎಂಎಂ ಪಕ್ಷದ ಉಪಾಧ್ಯಕ್ಷರು ಕೂಡಾ ಹೌದು. 'ಜಾರ್ಖಂಡ್ ಟೈಗರ್' ಎಂದು ಕರೆಯಲ್ಪಡುವ ಚಂಪೈ ಸೊರೆನ್ ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆಯ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನವೆಂಬರ್ 1956 ರಲ್ಲಿ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯ ಜಿಲಿಂಗ್‌ಗೋರಾ ಗ್ರಾಮದಲ್ಲಿ ಜನಿಸಿದ ಚಂಪೈ ಸೊರೆನ್ಗೆ ಏಳು ಮಕ್ಕಳಿದ್ದಾರೆ. ಇವರು ರೈತನ ಮಗನಾಗಿರುವುದು ವಿಶೇಷ.
ಚಂಪೈ ಸೊರೆನ್ ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ಮತ್ತು ಜೆಎಂಎಂನ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಅವರ ನಿಷ್ಠಾವಂತ ಬೆಂಬಲಿಗರಾಗಿದ್ದಾರೆ. ಹೇಮಂತ್ ಸೊರೆನ್ ನೇತೃತ್ವದ ಸರ್ಕಾರದಲ್ಲಿ ಚಂಪೈ ಸೊರೆನ್ ಅವರು ಸಾರಿಗೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು.
ಚಂಪೈ ನಾಲ್ಕು ಬಾರಿ ಶಾಸಕರಾಗಿದ್ದಾರೆ. 2005 ರಲ್ಲಿ ಜಾರ್ಖಂಡ್ ವಿಧಾನಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿ ಶಾಸಕರಾಗಿದ್ದರು. 2009 ರಲ್ಲಿ ಜಾರ್ಖಂಡ್ ವಿಧಾನಸಭೆಗೆ ಮತ್ತೊಮ್ಮೆ ಪುನರಾಯ್ಕೆ ಆಗಿದ್ದರು. ಆ ಬಳಿಕ ಅವರು ಹಿಂದಿರುಗಿ ನೋಡಿಲ್ಲ. 2019 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಬಂಧಿಸಿದ ಇಡಿ: ಚಂಪೈ ಸೊರೆನ್ ಹೊಸ ಮುಖ್ಯಮಂತ್ರಿ?
ಲೋಕಸಭೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಮತ್ತೊಮ್ಮೆ ಪುನರುಚ್ಚರಿಸಿದ ಮಮತಾ