ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಹೆಚ್9ಎನ್2 ವೈರಸ್ ಪತ್ತೆ ಪ್ರಕರಣವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ದೃಢಪಡಿಸಿದೆ. ಇದು ಭಾರತದಲ್ಲಿ ಪತ್ತೆಯಾದ ಎರಡನೇ ಪ್ರಕರಣವಾಗಿದೆ. 2019ರಲ್ಲಿ ಮೊದಲ ಹೆಚ್9ಎನ್2 ಸೋಂಕು ಪ್ರಕರಣ ವರದಿಯಾಗಿತ್ತು ಎಂದು ತಿಳಿಸಿದೆ.
ಸೋಂಕಿತ ಮಗು ಹೈಪರ್‌ರಿಯಾಕ್ಟಿವ್ ಏರ್‌ವೇ ಕಾಯಿಲೆಯಿಂದ ಬಳಲುತ್ತಿದ್ದ. ಜನವರಿ 26ರಂದು ಜ್ವರ ಮತ್ತು ಕಿಬ್ಬೊಟ್ಟೆಯ ನೋವು ಎಂದು ಶಿಶು ವೈದ್ಯರ ಬಳಿ ತೋರಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದು, ಮೇ 1ರಂದು ಆಕ್ಸಿಜನ್ನೊಂದಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ತೀವ್ರ ಉಸಿರಾಟದ ತೊಂದರೆ, ನಿರಂತರ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದ ಕಾರಣದಿಂದ ಮಗುವನ್ನು ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ, ಇನ್ಫ್ಲುಯೆನ್ಸ ಬಿ ಮತ್ತು ಅಡೆನೊವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಆರಂಭದಲ್ಲಿ, ಫೆಬ್ರವರಿ 28ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ, ತೀವ್ರ ಉಸಿರಾಟದ ತೊಂದರೆಯಿಂದಾಗಿ ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಗ ಪೀಡಿಯಾಟ್ರಿಕ್ ಐಸಿಯುಗೆ ದಾಖಲಿಸಿ, ಇಂಟ್ಯೂಬೇಟ್ ಮಾಡಲಾಗಿತ್ತು. ಇದಾದ ನಂತರ ಮೂಗಿನ ದ್ರವದ ಮಾದರಿಯನ್ನು ಕೋಲ್ಕತ್ತಾದ ಸೋಂಕು ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇನ್ಫ್ಲುಯೆನ್ಸ ಎ (ಹೆಚ್9ಎನ್2) ಮತ್ತು ರೈನೋವೈರಸ್ ವೈಸರ್ ದೃಢಪಟ್ಟಿತ್ತು ಎಂದು ಡಬ್ಲ್ಯೂಹೆಚ್ಒ ಮಾಹಿತಿ ನೀಡಿದೆ.
ಸೋಂಕಿತ ಮಗು ಮನೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಳಿಗಳ ಜೊತೆಗೆ ಒಡನಾಟ ಹೊಂದಿದ್ದ. ಆದಾಗ್ಯೂ, ಕುಟುಂಬಸ್ಥರು ಹಾಗೂ ನೆರೆಹೊರೆ ಜನರು ಅಥವಾ ಸೋಂಕು ವರದಿ ಮಾಡುವ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾದ ಆರೋಗ್ಯ ಕಾರ್ಯಕರ್ತರಲ್ಲಿ ಉಸಿರಾಟದ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ವಿರಳ ಪ್ರಕರಣಗಳು ಸಂಭವಿಸಬಹುದು ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಹಕ್ಕಿಜ್ವರಕ್ಕೂ ಬರಲಿದೆ ಲಸಿಕೆ: ಕೋವಿಡ್ ತಂತ್ರಜ್ಞಾನ ಆಧಾರಿತ ಹಕ್ಕಿ ಜ್ವರ ಲಸಿಕೆ ಅಭಿವೃದ್ಧಿ