ಸಿಲಿಗುರಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ 'ಅಕ್ಬರ್' ಮತ್ತು 'ಸೀತಾ' ಎಂಬ ಸಿಂಹದ ಜೋಡಿಗೆ ಹೊಸದಾಗಿ ಹೆಸರಿಡಬೇಕೆಂಬ ವಿಚಾರ ವಿವಾದ ಸೃಷ್ಟಿಸಿದೆ. ಈ ಸಿಂಹ ಮತ್ತು ಸಿಂಹಿಣಿಗೆ ಮರುನಾಮಕರಣ ಮಾಡುವುದಕ್ಕೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ತ್ರಿಪುರಾದಿಂದ ಬೆಂಗಾಲ್ ಸಫಾರಿ ಪಾರ್ಕ್‌ಗೆ ಇತ್ತೀಚೆಗೆ ಸಿಂಹ, ಸಿಂಹಿಣಿಯನ್ನು ಸ್ಥಳಾಂತರಿಸಲಾಗಿದೆ. ಈ ಜೋಡಿಗೆ 'ಅಕ್ಬರ್' ಮತ್ತು 'ಸೀತಾ' ಎಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮನವಿ ಸಲ್ಲಿಸಲಾಗಿದೆ. ಇದೇ ವಿಷಯ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
2016ರಲ್ಲಿ 'ದುಷ್ಮಂತ್'-'ಚಿನ್ಮಯಿ' ಎಂಬ ಸಿಂಹದ ಜೋಡಿಗೆ ಮೂರು ಮರಿಗಳು ಜನಿಸಿದ್ದವು. ಆಗ ತ್ರಿಪುರಾದ ಅರಣ್ಯ ಸಚಿವರಾಗಿದ್ದ ನರೇಶ್ ಜಮಾತಿಯಾ, ಈ ಮೂರು ಮರಿಗಳಿಗೆ 'ಅಮರ್', 'ಅಕ್ಬರ್', 'ಆ್ಯಂಟನಿ' ಎಂದು ಹೆಸರಿಟ್ಟಿದ್ದರು. ಸೋಮವಾರ ತ್ರಿಪುರಾದಿಂದ ಬೆಂಗಾಲ್ ಸಫಾರಿ ಪಾರ್ಕ್‌ಗೆ 'ಅಕ್ಬರ್', 'ಸೀತಾ' ಸಿಂಹಗಳು ಹಾಗೂ ಕೋತಿ, ಕೃಷ್ಣಮೃಗ ಜಿಂಕೆ ಮತ್ತು ಚಿರತೆಯನ್ನು ಸ್ಥಳಾಂತರ ಮಾಡಲಾಗಿದೆ.
ಕೇಂದ್ರ ಸರ್ಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಸುದೀರ್ಘ ಕಾಯುವಿಕೆಯ ನಂತರ ತ್ರಿಪುರ ಮತ್ತು ಪಶ್ಚಿಮ ಬಂಗಾಳದ ನಡುವೆ ಈ ಹಲವಾರು ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ, ಬೆಂಗಾಲ್ ಸಫಾರಿ ಪಾಕ್ನಿಂದ ರಾಯಲ್ ಬೆಂಗಾಲ್ ಟೈಗರ್, ತೇಜಲ್ ಮತ್ತು ಶೇರಾ ಎಂಬ ಎರಡು ಹುಲಿ ಮರಿಗಳನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸಲಾಗಿದೆ.
2016ರಲ್ಲಿ ಜನಿಸಿದ ಮೂರು ಮಕ್ಕಳ ಪೈಕಿ 'ಅಕ್ಬರ್' ಎಂಬ ಸಿಂಹವನ್ನು ಮಾತ್ರ ಸಫಾರಿ ಪಾರ್ಕ್‌ಗೆ ಸ್ಥಳಾಂತರ ಮಾಡಲಾಗಿದೆ. ತ್ರಿಪುರಾ ಮೃಗಾಲಯದಲ್ಲಿ 2018ರಲ್ಲಿ 'ಸೀತಾ' ಸಿಂಹಿಣಿಗೆ ಈಗ ಐದು ವರ್ಷ. ಈ ಎರಡೂ ಸಹ ಸದ್ಯಕ್ಕೆ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿವೆ. ರಾಯಲ್ ಬೆಂಗಾಲ್, ಘೇಂಡಾಮೃಗಗಳು, ಆನೆಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರು ವರ್ಷವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಈ ಬಾರಿ ಈ ಜೋಡಿ ಸಿಂಹಗಳ ಸೇರ್ಪಡೆಯೊಂದಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದೂ ಅಂದಾಜಿಸಲಾಗಿದೆ. ಈ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಸಿಂಹಗಳಿಗೆ ವಿಶಿಷ್ಟವಾದ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ಕಾಡಿನ ರಾಜನಿಗೆ ಸ್ನಾನ ಮಾಡಲು ಪ್ರತಿಕಾಲವೂ ನೀರು ಲಭ್ಯವಿರುತ್ತದೆ. ಪ್ರತಿದಿನ ಐದರಿಂದ ಏಳು ಕೆಜಿಯಷ್ಟು ಗೋಮಾಂಸವನ್ನೂ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.