ಜೈಪುರ್, ರಾಜಸ್ಥಾನ: ಪ್ರೀತಿ, ಸಂಬಂಧಗಳಿಗೆ ದೇಶದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ರಜಪೂತ್ ವಿವಾಹ ಸಾಬೀತು ಮಾಡಿದೆ. ಸದ್ಯ ದೇಶದೆಲ್ಲೆಡೆ ರಾಜಸ್ಥಾನದ ಪಿಲಿಬಂಗಾದ ರಾಜ ಕುಟುಂಬದ ಮದುವೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ವರ ರಾಜಸ್ಥಾನ ಮೂಲವಾದರೆ, ವಧು ನೆರೆಯ ದೇಶ ಪಾಕಿಸ್ತಾನ ಮೂಲದವರು.
ಪಾಕಿಸ್ತಾನದ ಉಮರ್‌ಕೋಟ್‌ನ ರಜಪೂತ ಕುಟುಂಬ ಮತ್ತು ರಾಜಸ್ಥಾನದ ರಜಪೂತ ಕುಟುಂಬದ ನಡುವೆ ಹೊಸ ಸಂಬಂಧ ಬೆಸೆದಿದೆ. ಪಾಕಿಸ್ತಾನದ ಸೊಂಗರ್ ಎಸ್ಟೇಟ್‌ನ ಶಿವದನ್ ಸಿಂಗ್ ಸೋಧಾ ಅವರ ಮೊಮ್ಮಗಳು ನೀತು ರಾಜ್, ರಾಜಸ್ಥಾನದ ಪಿಲಿಬಂಗಾದ ಠಾಕೂರ್ ಕಿಶೋರ್ ಶೇಖಾವತ್ ಅವರ ಪುತ್ರ ಉದಯವೀರ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಠಾಕೂರ್ ಕಿಶೋರ್ ಶೇಖಾವತ್ ಕಾಂಗ್ರೆಸ್ ನಾಯಕ ನರಪತ್ ಸಿಂಗ್ ಅವರ ಸಹೋದರರಾಗಿದ್ದಾರೆ.

ಪಿಲಿಬಂಗಾದ ಉಮೈದ್ ಹವೇಲಿಯಲ್ಲಿ ಈ ರಾಜಕುಟುಂಬದ ವಿವಾಹ ಜರುಗಿದ್ದು, ಪಾಕಿಸ್ತಾನದ ಶಿವದನ್ ಸಿಂಗ್ ಸೋಧಾ ಅವರ ಕುಟುಂಬವು ರಾಣಾ ಹಮೀರ್ ಸಿಂಗ್ ಅವರ ರಾಜವಂಶದೊಂದಿಗೆ ಸಂಬಂಧ ಬೆಳೆಸಿದೆ
ಜೈಪುರದಲ್ಲಿ ಮದುವೆ, ಪಿಲಿಬಂಗಾದಲ್ಲಿ ಆರತಕ್ಷತೆ: ಡಿಸೆಂಬರ್ 11ರಂದು ನೀತು ರಾಜ್ ಮತ್ತು ಉದಯ್ವೀರ್ ಸಿಂಗ್ ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಇದೀಗ ಪಿಲಿಬಂಗಾದಲ್ಲಿ ವಿವಾಹ ಆರತಕ್ಷತೆ ನಡೆಸಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಸೋನಾಗಢ ಸ್ಥಳದಲ್ಲಿ ಕೂಡ ಮದುವೆ ಕಾರ್ಯ ನಡೆಯಲಿದ್ದು, ಕೇವಲ 50 ಜನರು ಮಾತ್ರ ಇದರಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶೇಖಾವತ್ ಕುಟುಂಬ ವೀಸಾ ಪಡೆದ ಬಳಿಕ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಮದುವೆ ಸಂಬಂಧಿ ಕಾರ್ಯದಲ್ಲಿ ಭಾಗಿಯಾಗಲಿದೆ.
ಪಾಕಿಸ್ತಾನದಿಂದ ಬಂದ ಮದುವೆ ದಿಬ್ಬಣ: ಈ ಹಿಂದೆ ರಾಜರುಗಳು ಅವಿಭಜಿತ ಭಾರತದಲ್ಲಿ ದೇಶದೆಲ್ಲೆಡೆ ಸಂಬಂಧ ಹೊಂದುವುದು ಸಾಮಾನ್ಯವಾಗಿತ್ತು. ಇದೀಗ ಭಾರತ ವಿಭಜನೆಗೊಂಡಿದ್ದು, ನೆರೆಯ ಪಾಕಿಸ್ತಾನದ ಜೊತೆಗಿನ ಸಂಬಂಧಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತಿದೆ.

2015ರಲ್ಲಿ ಕೂಡ ಕನೋಟಾ ಎಸ್ಟೇಟ್‌ನ ಠಾಕೂರ್ ಮಾನ್‌ಸಿಂಗ್ ಅವರ ಪುತ್ರಿ ಪದ್ಮಿನಿ ಕುಮಾರಿ ಪಾಕಿಸ್ತಾನದ ಉಮರ್ಕೋಟ್ ಎಸ್ಟೇಟ್‌ನ ರಾಣಾ ಹಮೀರ್ ಸಿಂಗ್ ಅವರ ಮಗ ಕುನ್ವರ್ ಕರ್ಣಿ ಸಿಂಗ್ ಅವರೊಂದಿಗೆ ವಿವಾಹವಾಗಿದ್ದರು. ಈ ವೇಳೆ, ಪಾಕಿಸ್ತಾನದಿಂದ ಮದುವೆ ಮೆರವಣಿಗೆ ಜೈಪುರಕ್ಕೆ ಬಂದಿತ್ತು.
ಯಾರು ಇವರು ರಾಣಾ ಹಮೀರ್ ಸಿಂಗ್ ಸೋಧಾ?: ರಾಣಾ ಹಮೀರ್ ಸಿಂಗ್ ಅವರು ಉಮರ್‌ಕೋಟ್‌ನ 26 ನೇ ರಾಣಾ ಮತ್ತು ಪಾಕಿಸ್ತಾನದ ಹಿರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. 2018ರಿಂದ 2023ರವರೆಗೆ ಸಿಂಧ್ ಪ್ರಾಂತ್ಯದ ಸದಸ್ಯರಾಗಿದ್ದರು.
ಇವರ ತಂದೆ ರಾಣಾ ಚಂದ್ರ ಸಿಂಗ್. ಇವರನ್ನು ಪಾಕಿಸ್ತಾನದಲ್ಲಿ ರಾಣಾ ಸಾಹೇಬ್ ಎಂದೂ ಕರೆಯಲಾಗುತ್ತಿದೆ. ಸಿಂಗ್ ಅವರು ಮೂರು ಬಾರಿ ಸಿಂಧ್ ವಿಧಾನಸಭೆಯ ಸದಸ್ಯರಾಗಿದ್ದಾರೆ. 1990 ರಲ್ಲಿ ಅವರು ಪಾಕಿಸ್ತಾನ ಹಿಂದೂ ಪಕ್ಷದ ವೇದಿಕೆಯಿಂದ ಅಲ್ಪಸಂಖ್ಯಾತರ ಪ್ರತ್ಯೇಕ ಕ್ಷೇತ್ರಕ್ಕೆ ಆಯ್ಕೆಯಾಗಿದ್ದರು. 1993ರಲ್ಲಿ ನೀರಾವರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಶೋಧನಾ ಸಚಿವರಾಗಿದ್ದರು. ಉಮರ್‌ಕೋಟ್‌ನ ನಾಯಿಬ್ ನಾಜಿಮ್ ಮತ್ತು ಸಿಂಧ್ ಆರಿಡ್ ವಲಯ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದಾರೆ.
ರಾಣಾ ಹಮೀರ್ ಸಿಂಗ್ ಅವರ ಅಜ್ಜ ರಾಣಾ ಅರ್ಜುನ್ ಸಿಂಗ್ ವಿಭಜನೆಯ ನಂತರ ಪಾಕಿಸ್ತಾನವನ್ನು ತಮ್ಮ ದೇಶವಾಗಿ ಆರಿಸಿಕೊಂಡರು. 1946ರಲ್ಲಿಯೂ ರಾಣಾ ಅರ್ಜುನ್ ಸಿಂಗ್ ಅವರು ಆಲ್ ಇಂಡಿಯಾ ಮುಸ್ಲಿಂ ಲೀಗ್‌ನ ವೇದಿಕೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಹಮೀರ್ ಸಿಂಗ್ ತಂದೆ ರಾಣಾ ಚಂದ್ರ ಸಿಂಗ್ ಕೂಡ ಏಳು ಬಾರಿ ಸಂಸದರಾಗಿದ್ದು, ಕೇಂದ್ರ ಸಚಿವರಾಗಿದ್ದಾರೆ. ಇವರು ಮಾಜಿ ಪ್ರಧಾನಿ ಝುಲ್ಫೀಕರ್ ಆಲಿ ಭುಟ್ಟೋ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸೋಧಾ ಕುಟುಂಬವೂ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸ್ಥಾಪಕ ಸದಸ್ಯರೆಂದು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಯಾಗ್‌ರಾಜ್ ಮಹಾಕುಂಭ ಮೇಳ: ಸಾಧುವಿನ ಶಿರದಲ್ಲಿ 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯ ಕಿರೀಟ