ವಯನಾಡ್(ಕೇರಳ): ಪ್ರಕೃತಿ ಮುನಿಸಿಕೊಂಡ ಕಾರಣ ಕೇರಳದ ವಯನಾಡ್ ನಲುಗಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವು ಯುವಕರು ತಮ್ಮ ಪ್ರಾಣ ಲೆಕ್ಕಿಸದೆ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಪ್ರಜೀಶ್ ಕೂಡ ಒಬ್ಬರು. ಅಪಾಯ ಲೆಕ್ಕಿಸದೇ ಭೂಕುಸಿತದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಮುಂದಾಗಿದ್ದರು. ಹಲವರನ್ನು ರಕ್ಷಿಸಿದ ಅವರು ಇದೀಗ ಸಾವನ್ನಪ್ಪಿದ್ದಾರೆ.
ಪ್ರಕೃತಿ ವಿಕೋಪದ ಮಾಹಿತಿ ತಿಳಿದ ವಯನಾಡ್ ಚುರಲ್ಮಾದ ಪ್ರಜೀಶ್ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಗೆಳೆಯರು ಕಷ್ಟದಲ್ಲಿದ್ದಾಗ ಮೊದಲು ಸಹಾಯ ಮಾಡುವವರು ಎಂಬ ಖ್ಯಾತಿ ಇವರದು. ಮುಂಡಕ್ಕೈ ಪ್ರದೇಶದಲ್ಲಿ ಭೂಕುಸಿತವಾಗಿದೆ ಎಂದು ತಿಳಿದ ಅವರು ರಕ್ಷಿಸಲು ಅಪಾಯಕಾರಿ ಬೆಟ್ಟದ ಮಾರ್ಗದಲ್ಲಿ ಜೀಪ್ ತೆಗೆದುಕೊಂಡು ಹೋಗಿ ಅದೆಷ್ಟೋ ಜನರನ್ನು ಕಾಪಾಡಿದ್ದರು. ಬಳಿಕ ಜನರೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಸಹಾಯಕ್ಕಾಗಿ ಮತ್ತೊಂದು ಫೋನ್ ಕರೆ ಬಂದಿದೆ. ಹೀಗಾಗಿ ಜೀಪಿನಲ್ಲಿ ಮತ್ತೆ ಅದೇ ಜಾಗಕ್ಕೆ ಹೋಗಿದ್ದ ಅವರು ವಾಪಸ್ ಬರಲೇ ಇಲ್ಲ.
ಚುರಲ್ಮಲಾ ಪ್ರದೇಶದಲ್ಲಿ ಜಖಂಗೊಂಡ ಜೀಪ್ ಪತ್ತೆಯಾಗಿದೆ. ಆದರೆ ಅವರ ಗುರುತು ಸಿಕ್ಕಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಜೀಶ್ ಎಲ್ಲರಿಗೂ ಇಷ್ಟ. ನಮ್ಮ ಮನೆಗಳಲ್ಲಿ ಯಾವುದೇ ಘಟನೆ ನಡೆದರೂ ಅವರೇ ಮುಂದಾಳತ್ವ ವಹಿಸಿ ಬೆಂಬಲ ನೀಡುತ್ತಿದ್ದರು. "ನನ್ನ ಮಗಳ ಮದುವೆಗೆ ಅವರು ಮಾಡಿದ ಸಹಾಯ ಮರೆಯಲಾಗದು" ಎಂದು ಮತ್ತೊಬ್ಬರು ಸ್ಮರಿಸಿದರು.
ಆ ಗುಡ್ಡಗಾಡು ಪ್ರದೇಶಕ್ಕೆ ಹೋಗಬೇಡಿ ಎಂದು ಹೇಳಿದರೂ ಕೇಳಲಿಲ್ಲ ಎಂದು ಪ್ರಜೀಶ್ ಸ್ನೇಹಿತರು ತಿಳಿಸಿದರು. ಮುಂಡಕ್ಕೈ ಪ್ರದೇಶದಲ್ಲಿ ಹಲವರು ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸಲು ಮುಂದಾದರು. ಅವನು ನಮ್ಮ ಮಹಾವೀರ. ಈಗ ಆತ ನಮ್ಮ ಮುಂದೆ ಇಲ್ಲ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: ವಯನಾಡ್ ಭೂ ಕುಸಿತ: ರಕ್ಷಣಾ ತಂಡ ಆಗುಮಿಸುವ ಮುನ್ನವೇ ಮಾಹಿತಿ ನೀಡಿದ ಮೊದಲ ಮಹಿಳೆ ಸಾವು - Wayanad devastating landslide