ತಿರುವನಂತಪುರಂ(ಕೇರಳ): ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇತ್ತೀಚಿಗೆ ಘೋಷಣೆಯಾಗಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ಅವರನ್ನು ಈಗಾಗಲೇ ಕಣಕ್ಕಿಳಿಸಿದೆ. ಇದೀಗ ಬಿಜೆಪಿ ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.
ಕೋಜಿಕ್ಕೋಡ್ ನಗರ ಪಾಲಿಕೆಯಲ್ಲಿ ಎರಡು ಬಾರಿ ಸದಸ್ಯೆಯಾಗಿರುವ ನವ್ಯಾ ಹರಿದಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಮತ್ತು ಸಿಪಿಐನ ಸತ್ಯನ್ ಮೊಕೇರಿ ಅವರನ್ನು ಎದುರಿಸಲಿದ್ದಾರೆ.
ಶನಿವಾರ ರಾತ್ರಿ ಬಿಜೆಪಿ ದೇಶದ ವಿವಿಧೆಡೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈ ಪೈಕಿ ನವ್ಯಾ ಹರಿದಾಸ್ ಕಿರಿಯ ನಾಯಕಿಯಾಗಿದ್ದಾರೆ. ಪ್ರತಿಷ್ಠೆಯ ಕದನಕ್ಕೆ ಇವರನ್ನು ಕಣಕ್ಕಿಳಿಸಿರುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.
ವೃತ್ತಿಯಲ್ಲಿ ಟೆಕ್ಕಿ ನವ್ಯಾ ಹರಿದಾಸ್: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನವ್ಯಾ ಹರಿದಾಸ್, ಕೋಜಿಕ್ಕೋಡ್ ನಗರ ಪಾಲಿಕೆಯಲ್ಲಿ ಬಿಜೆಪಿ ಸಂಸದೀಯ ನಾಯಕಿಯೂ ಹೌದು. ಇದರ ಜೊತೆಗೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ಉಪ ಚುನಾವಣೆ ಯಾಕೆ?: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಜಸ ಸಾಧಿಸಿದ್ದರು. ರಾಯ್‌ಬರೇಲಿ ಕ್ಷೇತ್ರದೊಂದಿಗೆ ತಮ್ಮ ಕುಟುಂಬ ನಿಕಟ ಸಂಬಂಧ ಹೊಂದಿರುವ ಕಾರಣ ಅವರು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಈ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ನವೆಂಬರ್ 13ರಂದು ಉಪ ಚುನಾವಣೆ ನಡೆಸಲಿದೆ.
ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ ; ಬೊಮ್ಮಾಯಿ ಪುತ್ರನಿಗೆ ಟಿಕೆಟ್ - ಇಲ್ಲಿದೆ ಭರತ್ ಬೊಮ್ಮಾಯಿ ಕಿರುಪರಿಚಯ