ವಯನಾಡ್(ಕೇರಳ): ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾದ ಸ್ಥಾನಕ್ಕೆ ಪ್ರಿಯಾಂಕಾ ವಾದ್ರಾ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆಯಲ್ಲಿ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ತಾವು 12 ಕೋಟಿ ರೂಪಾಯಿ ಮೌಲ್ಯದ ಸ್ಥಿರ-ಚರಾಸ್ತಿ ಹೊಂದಿರುವುದಾಗಿ ಪ್ರಕಟಿಸಿದ್ದಾರೆ.
ಕೇರಳದ ವಯನಾಡ್ ಕ್ಷೇತ್ರದ ಲೋಕಸಭೆ ಉಪ ಚುನಾವಣೆಯ ಮೂಲಕ ಚೊಚ್ಚಲ ಬಾರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ರಾಜಕೀಯಕ್ಕೆ ಅಧಿಕೃತವಾಗಿ ಅಡಿ ಇಡುತ್ತಿದ್ದಾರೆ.
ಪ್ರಿಯಾಂಕಾ ಆಸ್ತಿ ವಿವರ: ಪ್ರಿಯಾಂಕಾ ತಮ್ಮ ಅಫಿಡವಿಟ್‌ನಲ್ಲಿ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿ ಎಂದು ನಮೂದಿಸಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿ 12 ಸಾವಿರ ಚದರ ಅಡಿಗಳ ಫಾರ್ಮ್‌ಹೌಸ್ ಇದೆ. ಇದರ ಬೆಲೆ 5.64 ಕೋಟಿ ರೂಪಾಯಿ. 8 ಲಕ್ಷ ರೂಪಾಯಿ ಮೌಲ್ಯದ ಹೋಂಡಾ ಸಿಆರ್‌ವಿ ಕಾರು ಹೊಂದಿದ್ದಾರೆ. ಇತರ ಆಸ್ತಿಗಳ ಪೈಕಿ 2.24 ಕೋಟಿ ರೂಪಾಯಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ, 1.16 ಕೋಟಿ ರೂಪಾಯಿ ಮೌಲ್ಯದ ವಿವಿಧ ಆಭರಣಗಳಿವೆ ಎಂದಿದ್ದಾರೆ.
ಸಹೋದರ ರಾಹುಲ್ ಗಾಂಧಿ ಜೊತೆಗೂಡಿ ಮೆಹ್ರೌಲಿಯಲ್ಲಿ 2.10 ಕೋಟಿ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾಗಿ ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಆಸ್ತಿ ಮೌಲ್ಯದಲ್ಲಿ 46.39 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದಿದ್ದಾಗಿ ಘೋಷಿಸಿದ್ದಾರೆ. ಇದು ಬ್ಯಾಂಕ್‌ಗಳು ಮತ್ತು ಇತರ ಹೂಡಿಕೆಗಳ ಬಡ್ಡಿಯಿಂದ ಬಂದ ಹಣವಾಗಿದೆ. 15.75 ಲಕ್ಷ ರೂಪಾಯಿ ಸಾಲವಿದೆ. ತಮ್ಮ ವಿರುದ್ಧ ಮೂರು ಪ್ರಕರಣಗಳಿವೆ. ಬ್ರಿಟನ್ನ ಸಂಡರ್ಲ್ಯಾಂಡ್ ವಿಶ್ವವಿದ್ಯಾಲಯದಿಂದ 2010ರಲ್ಲಿ ಬೌದ್ಧ ಅಧ್ಯಯನದಲ್ಲಿ ಪಿಜಿ ಡಿಪ್ಲೋಮಾ ಪಡೆದಿದ್ದಾಗಿ ಘೋಷಿಸಿದ್ದಾರೆ.
ಪತಿ ವಾದ್ರಾ ಆಸ್ತಿ ಐದು ಪಟ್ಟು ಹೆಚ್ಚು: ಪತಿ ರಾಬರ್ಟ್ ವಾದ್ರಾ ಆಸ್ತಿ ಪ್ರಿಯಾಂಕಾ ಅವರಿಗಿಂತ ಐದು ಪಟ್ಟು ಹೆಚ್ಚಿದೆ. ರಾಬರ್ಟ್ ವಾದ್ರಾ ಒಟ್ಟು 75.61 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ 37.9 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 27.64 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕೆಲವು ಕಂಪನಿಗಳಲ್ಲಿನ ಪಾಲುದಾರಿಕೆ, ಕೆಲ ವಾಹನಗಳನ್ನೂ ಹೊಂದಿದ್ದಾರೆ. ಪತಿಗೆ 10.03 ಕೋಟಿ ಸಾಲವಿದೆ ಎಂದು ಉಲ್ಲೇಖಿಸಿದ್ದಾರೆ. ಒಟ್ಟಾರೆ, ಪ್ರಿಯಾಂಕಾ ವಾದ್ರಾ ದಂಪತಿಯ ಆಸ್ತಿ 88 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ವಯನಾಡಿನಲ್ಲಿ ಬೃಹತ್ ರೋಡ್ ಶೋ ಬಳಿಕ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ