ನವದೆಹಲಿ: ಮೂರನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣ ಶೇಕಡಾ 65.68 ರಷ್ಟಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಇದು ಅಂತಿಮ ಮತದಾನದ ಅಂಕಿ - ಅಂಶವಾಗಿದ್ದು, ಆಯೋಗವು ಶನಿವಾರ ಈ ಮಾಹಿತಿ ಬಿಡುಗಡೆ ಮಾಡಿದೆ.
ಮೂರನೇ ಹಂತದ ಮತದಾನ ನಡೆದ ಒಂದು ದಿನದ ನಂತರ ಮೇ 8 ರಂದು ಚುನಾವಣಾ ಸಮಿತಿಯು ಇದೇ ರೀತಿಯ ಮತದಾನದ ಅಂಕಿ - ಅಂಶವನ್ನು ನೀಡಿತ್ತು. 66.89 ರಷ್ಟು ಪುರುಷರು, 64.4 ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. 8.85 ಕೋಟಿ ಪುರುಷರು ಮತ್ತು 8.39 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 17.24 ಕೋಟಿ ನಾಗರಿಕರು ತಮ್ಮ ಮತದಾನದ ಹಕ್ಕು ಚಲಾಯಿಸಿರುವುದಾಗಿ ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
ಮೂರನೇ ಹಂತದ ಮತದಾನವಾದ 10 ರಾಜ್ಯಗಳು ಸೇರಿದಂತೆ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 93 ಕ್ಷೇತ್ರಗಳಲ್ಲಿ ಚುನಾವಣಾ ನಡೆದಿತ್ತು. 2019ರ ಸಂಸತ್ ಚುನಾವಣೆಯ ಮೂರನೇ ಹಂತದಲ್ಲಿ, ಮತದಾರರ ಮತದಾನವು ಶೇಕಡಾ 68.4 ರಷ್ಟಿತ್ತು. ಈ ಬಾರಿ ಶೇ 2ರಷ್ಟು ಮತದಾನ ಕಡಿಮೆಯಾಗಿದೆ.