ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ನೆರೆ ಆವರಿಸಿದೆ. 700ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ನದಿಗಳು ಉಕ್ಕಿ ಹರಿಯುತ್ತಿವೆ. ಭಾರಿ ಮಳೆಯ ಅಬ್ಬರಕ್ಕೆ 11 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಪರಿಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಅವಧಿಯಲ್ಲಿ ಸರಾಸರಿ 7.5 ಮಿಮೀ ಮಳೆ ದಾಖಲಾಗಿದೆ. ಆರು ಜನರು ಪ್ರವಾಹದ ಅಬ್ಬರಕ್ಕೆ ಸಿಲುಕಿ ಮೃತಪಟ್ಟರೆ, ಸಿಡಿಲು ಮತ್ತು ಹಾವು ಕಡಿತದಿಂದ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಓರ್ವ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, 17 ಜಿಲ್ಲೆಗಳ 732 ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ.
ಷಹಜಹಾನ್‌ಪುರ ಮತ್ತು ಬರೇಲಿಯ ನಗರ ಪ್ರದೇಶಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಹಜಾನ್‌ಪುರ ಜಿಲ್ಲೆಯ ಲಖನೌ - ಬರೇಲಿ ಹೆದ್ದಾರಿಯಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಯಿತು. ಬರೇಲಿ ಜಿಲ್ಲೆಯಲ್ಲೂ ಇದೇ ರೀತಿಯ ಸಮಸ್ಯೆಗಳು ವರದಿಯಾಗಿವೆ.
"ಪ್ರವಾಹ ಪೀಡಿತ ಪ್ರದೇಶಗಳಲ್ಲಿ NDRF ಮತ್ತು SDRF ತಂಡಗಳು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುವುದ ಜೊತೆಗೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಜನರಿಗಾಗಿ ಪ್ರವಾಹ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದೇವೆ" ಎಂದು ರಾಜ್ಯ ಪರಿಹಾರ ಆಯುಕ್ತ ನವೀನ್ ಕುಮಾರ್ ಹೇಳಿದ್ದಾರೆ.
4 ದಿನಗಳ ಕಾಲ 44 ಜಿಲ್ಲೆಗಳಲ್ಲಿ ಭಾರಿ ಮಳೆ - ಹವಾಮಾನ ಇಲಾಖೆ ಎಚ್ಚರಿಕೆ: ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 10.4 ನಿರೀಕ್ಷಿತ ಮಳೆಯ ವಿರುದ್ಧ 5 ಮಿಮೀ ಮಳೆ ದಾಖಲಾಗಿದೆ. ಜೂನ್ 1ರಿಂದ ಈವರೆಗೆ ಉತ್ತರ ಪ್ರದೇಶದಲ್ಲಿ 179.8 ಮಿಮೀ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ, 218.4 ಮಿಮೀ ಮಳೆ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಶೇಕಡಾ 21ರಷ್ಟು ಹೆಚ್ಚು ಮಳೆಯಾಗಿದೆ.
ನೈರುತ್ಯ ಮುಂಗಾರು ಚುರುಕು: ಉತ್ತರ ಪ್ರದೇಶದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿವೆ. ರಾಜ್ಯದ ಸುಮಾರು ಎಂಟು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರದಂತೆ ಆಡಳಿತ ಮಂಡಳಿಗೆ ಸೂಚನೆ ಕೊಟ್ಟಿದ್ದಾರೆ. ಹವಾಮಾನ ಇಲಾಖೆಯು ಉತ್ತರ ಪ್ರದೇಶದ ಸುಮಾರು 44 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮತ್ತು ಮಿಂಚುಗಳ ಎಚ್ಚರಿಕೆ ನೀಡಿದೆ.
ಈ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ: ಬಂದಾ, ಚಿತ್ರಕೂಟ, ಕೌಶಂಬಿ, ಪ್ರಯಾಗ್‌ರಾಜ್, ಫತೇಪುರ್, ಪ್ರತಾಪ್‌ಗಢ, ಸೋನ್‌ಭದ್ರ, ಮಿರ್ಜಾಪುರ, ಚಂದೌಲಿ, ವಾರಣಾಸಿ, ಎಸ್‌ಆರ್ ನಗರ, ಜೌನ್‌ಪುರ್, ಘಾಜಿಪುರ, ಅಜಂಗಢ, ಮೌ, ಬಲ್ಲಿಯಾ, ದೇವರಿಯಾ, ಗೋರಖ್‌ಪುರ, ಬಸ್ತಿ, ಎಸ್‌ಕೆ ನಗರ, ಬಸ್ತಿ ಕುಶಿನಗರ, ಮಹಾರಾಜ್‌ಗಂಜ್, ಸಿದ್ಧಾರ್ಥನಗರ, ಗೊಂಡಾ, ಬಲರಾಮ್‌ಪುರ ಶ್ರಾವಸ್ತಿ, ಬಹ್ರೈಚ್ ಲಖಿಮ್‌ಪುರ್ ಖೇರಿ, ಸೀತಾಪುರ, ಅಮೇಥಿ, ಸುಲ್ತಾನ್‌ಪುರ, ಅಯೋಧ್ಯಾ, ಅಂಬೇಡ್ಕರ್ ನಗರ, ಸಹರಾನ್‌ಪುರ, ಮುಜಾಫರ್‌ನಗರ, ಮಥುರಾ, ಆಗ್ರಾ, ಫಿರೋಜಾಬಾದ್, ಬಿಜ್ನೋರ್, ಮೊರಾದಾಬಾದ್, ರಾಮಪುರ, ಮೊರಾದ್ಲಿ, ರಾಮಪುರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಎಲ್ಲ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಲಖನೌದಲ್ಲಿ ಪ್ರವಾಹ: ಉತ್ತರ ಪ್ರದೇಶದ ರಾಜಧಾನಿ ಲಖನೌದ ಕೆಲವು ಪ್ರದೇಶಗಳಲ್ಲಿ ಗೋಮತಿ ನದಿ ಉಕ್ಕಿ ಹರಿಯುತ್ತಿದೆ. ಗೋಮತಿ ನದಿಯ ನೀರು ಸುಲ್ತಾನ್‌ಪುರ, ಅಕ್ದರಿಯಾ ಕಲಾ, ಲಾಸ್ ಮತ್ತು ಬಕ್ಷಿ ತಲಾಬ್ ತಹಸಿಲ್ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗಿದೆ. ಶೇ.50ಕ್ಕೂ ಹೆಚ್ಚು ಬೆಳೆ ಜಲಾವೃತವಾಗಿದೆ.
ಇದನ್ನೂ ಓದಿ: ಭಾರಿ ಮಳೆಯಿಂದ ನಿರಂತರ ಭೂಕುಸಿತ: ಕಾರಿನ ಮೇಲೆ ಉರುಳಿದ ಬೃಹತ್ ಬಂಡೆ: ಮಹಿಳೆ ಸಾವು, ಹಲವರಿಗೆ ಗಾಯ - Fresh Landslide rocks