ಲಖನೌ (ಉತ್ತರ ಪ್ರದೇಶ): ಲೋಕಸಭೆ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಪಕ್ಕಾ ಆಗಿದೆ. ಸೀಟು ಹಂಚಿಕೆ ಕುರಿತ ಹಲವು ವಿವಾದ, ಕಸರತ್ತುಗಳ ಬಳಿಕ ಉಭಯ ಪಕ್ಷಗಳ ದೋಸ್ತಿಗೆ ಅಂತಿಮ ಮುದ್ರೆ ಒತ್ತಲಾಗಿದೆ. ಇದನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶವು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ದೇಶದ ಅತಿದೊಡ್ಡ ರಾಜ್ಯವಾಗಿದೆ. ಲೋಕಸಭೆ ಚುನಾವಣಾ ಫಲಿತಾಂಶದ ಮೇಲೆ ಉತ್ತರ ಪ್ರದೇಶವು ಈ ಮಹತ್ವ ಹಾಗೂ ನಿರ್ಣಾಯಕ ಪಾತ್ರ ಬೀರುತ್ತದೆ. ಆದ್ದರಿಂದ ಕಾಂಗ್ರೆಸ್, ಸಮಾಜವಾದಿ ಪಕ್ಷ ಒಳಗೊಂಡ 'ಇಂಡಿಯಾ' ಮೈತ್ರಿಕೂಟದ ನಡೆ ಕುತೂಹಲಕ್ಕೆ ಕಾರಣವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಒಂದೇ ವೇದಿಕೆ ಬಂದಿದ್ದರೂ, ಸೀಟು ಹಂಚಿಕೆ ವಿಷಯ ಬಿಕ್ಕಟ್ಟು ಸೃಷ್ಟಿಸಿತ್ತು. ಈಗ ಇದು ಪರಿಹಾರವಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಇಂಡಿಯಾ ಮೈತ್ರಿಕೂಟದ ಇತರ ಮಿತ್ರಪಕ್ಷಗಳೊಂದಿಗೆ ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಅಧಿಕೃತವಾಗಿ ಪ್ರಕಟಿಸಿದ್ದು, ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 63 ಸ್ಥಾನಗಳಲ್ಲಿ ಎಸ್‌ಪಿ ಮತ್ತು ಇತರ ಮಿತ್ರಪಕ್ಷಗಳು ಸ್ಪರ್ಧಿಸಲಿವೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ 63 ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದರು. ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತನಾಡಿ, ತಮ್ಮ ಮೈತ್ರಿ ಇರುತ್ತದೆ. ಶೀಘ್ರದಲ್ಲೇ ಅಂತಿಮ ಘೋಷಣೆ ಹೊರಬೀಳಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಜೊತೆಗೆ ಮೈತ್ರಿ ಖಚಿತ ಪಡಿಸಿದ್ದರು.
ಪ್ರಿಯಾಂಕಾ ಗಾಂಧಿ ಪ್ರಮುಖ ಪಾತ್ರ: ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಭದ್ರವಾಗುವಲ್ಲಿ ಹಾಗೂ ಸೀಟು ಹಂಚಿಕೆ ಸಮಸ್ಯೆ ಪರಿಹರಿಸುವಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಖಿಲೇಶ್ ಯಾದವ್ ಅವರೊಂದಿಗೆ ಪ್ರಿಯಾಂಕಾ ಗಾಂಧಿ ನೇರವಾಗಿ ಮಾತನಾಡಿದ್ದಾರೆ. ಇದು ಪರಸ್ಪರ ಒಪ್ಪುವ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಹಾಯ ಮಾಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೇ, ಪ್ರಿಯಾಂಕಾ ಗಾಂಧಿ ಮತ್ತು ಅಖಿಲೇಶ್ ಯಾದವ್ ನಡುವಿನ ದೂರವಾಣಿ ಸಂಭಾಷಣೆಯ ನಂತರವೇ ಸೀತಾಪುರ ಮತ್ತು ಬಾರಾಬಂಕಿ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಮಾಜವಾದಿ ಪಕ್ಷ ಒಪ್ಪಿಗೆ ನೀಡಿದೆ ಎಂದೂ ತಿಳಿದು ಬಂದಿದೆ.
ಕಾಂಗ್ರೆಸ್‌ಗೆ 17 ಕ್ಷೇತ್ರಗಳು ಯಾವುವು?: ಉತ್ತರ ಪ್ರದೇಶದ ವಾರಣಾಸಿ, ಅಮೇಥಿ, ರಾಯ್‌ಬರೇಲಿ, ಸೀತಾಪುರ್, ಬಾರಾಬಂಕಿ, ಕಾನ್ಪುರ್ ನಗರ, ಸಹರಾನಪುರ್, ಅಮ್ರೋಹಾ, ಫತೇಪುರ್ ಸಿಕ್ರಿ, ಮಹಾರಾಜ್ಗಂಜ್, ಬನ್ಸ್ಗಾಂವ್, ಬುಲಂದ್ಶಹರ್, ಘಾಜಿಯಾಬಾದ್, ಝಾನ್ಸಿ, ಮಥುರಾ, ಪ್ರಯಾಗರಾಜ್ ಮತ್ತು ಡಿಯೋರಿಯಾ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಈ ಮೈತ್ರಿಯ ಭಾಗವಾಗಿ ವಾರಣಾಸಿ, ರಾಯ್‌ಬರೇಲಿ, ಅಮೇಥಿ ಮತ್ತು ಗಾಜಿಯಾಬಾದ್ ಸೇರಿ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ಎಸ್‌ಪಿ ಒಪ್ಪಿಗೆ ನೀಡಿದೆ. ಮಧ್ಯಪ್ರದೇಶದಲ್ಲಿ ಖಜುರಾಹೊ ಎಂಬ ಒಂದು ಕ್ಷೇತ್ರವನ್ನು ಎಸ್‌ಪಿಗೆ ನೀಡಲಾಗಿದೆ. ಆ ರಾಜ್ಯದಲ್ಲಿ ಉಳಿದ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಇದಕ್ಕೆ ಎಸ್‌ಪಿ ಬೆಂಬಲ ಸೂಚಿಸಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಬ್ಯಾಂಕ್ ಖಾತೆಗಳಿಂದ ₹ 65 ಕೋಟಿ ವಿತ್ಡ್ರಾಗೆ ಸೂಚನೆ: ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದ ಮಾಕೇನ್