ಲಖನೌ, ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್ಪಿ) 37 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆದ್ದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರಲ್ಲೂ ಅಖಿಲೇಶ್ ಯಾದವ್ ಕುಟುಂಬದಿಂದ ಸ್ಪರ್ಧಿಸಿದ್ದ ಎಲ್ಲ ಐವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಪತ್ನಿ ಡಿಂಪಲ್ ಯಾದವ್ ಸೇರಿದಂತೆ 3 ಸೋದರ ಸಂಬಂಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಎಲ್ಲ ಐವರು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಸತ್ತಿಗೆ ಪ್ರವೇಶಿಸಿದ್ದಾರೆ. ಕುಟುಂಬವನ್ನು ಹೊರತುಪಡಿಸಿ, ಯಾದವ ಸಮುದಾಯದ ಯಾವುದೇ ಅಭ್ಯರ್ಥಿಯನ್ನು ಚುನಾವಣೆಗೆ ಘೋಷಿಸಿರಲಿಲ್ಲ. ಚುನಾವಣೆಗೂ ಮುನ್ನ ಅತ್ಯಂತ ಹಿಂದುಳಿದ ಮತ್ತು ಇತರ ಸಮುದಾಯಗಳ ನಾಯಕರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು. ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಖಿಲೇಶ್ ಯಾದವ್ ಅವರ ಹಿಂದುಳಿದ, ದಲಿತ ಅಲ್ಪಸಂಖ್ಯಾತ ಸಮೀಕರಣದ ರಾಜಕೀಯ ತಂತ್ರ ಯಶಸ್ವಿಯಾಗಿದೆ. ಯಾದವ್ ಅವರ ಈ ತಂತ್ರದಿಂದ ಐದು ಸ್ಥಾನಗಳಲ್ಲಿದ್ದ ಎಸ್ಪಿ 37 ಸ್ಥಾನಗಳಿಗೆ ಏರಿಕೆ ಕಂಡಿದೆ.
ಅಖಿಲೇಶ್ ಕುಟುಂದ ಐವರಿಗೆ ಗೆಲುವು: ಕನೌಜ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಸ್ಪಿ ವರಿಷ್ಠ ಅಖಿಲೇಶ್ ಯಾದವ್ ಬಿಜೆಪಿ ಅಭ್ಯರ್ಥಿ ಸುಬ್ರತಾ ಪಾಠಕ್ ವಿರುದ್ದ 1,70,000 ಅಂತರದ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ, ಅವರ ಪತ್ನಿ ಡಿಂಪಲ್ ಯಾದವ್ ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ ಜೈವೀರ್ ಸಿಂಗ್ ವಿರುದ್ಧ ಸುಮಾರು 2,21,000 ಅಂತರದ ಮತಗಳಿಂದ ಜಯಭೇರಿ ಬಾರಿಸಿದ್ದಾರೆ.
ಯಾದವ್ ಕುಟುಂಬದ ಮತ್ತೊಬ್ಬ ನಾಯಕ ಧರ್ಮೇಂದ್ರ ಯಾದವ್ ಅವರು ಅಜಂಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಭೋಜ್‌ಪುರಿ ನಟ ದಿನೇಶ್ ಲಾಲ್ ಅಲಿಯಾಸ್ ನಿರಾಹುವಾ ಅವರನ್ನು ಸೋಲಿಸಿದರು. ಧರ್ಮೇಂದ್ರ ಯಾದವ್ ಅವರು ದಿನೇಶ್ ಲಾಲ್ ನಿರಾಹುವಾ ಅವರನ್ನು 1.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಅಕ್ಷಯ್ ಯಾದವ್ ಅವರು ಫಿರೋಜಾಬಾದ್ನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ವಿಶ್ವದೀಪ್ ಸಿಂಗ್ ವಿರುದ್ದ 90 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಮತ್ತೊಬ್ಬ ಕಟುಂಬ ಸದಸ್ಯ ಆದಿತ್ಯ ಯಾದವ್ ಬದೌನ್ ನಿಂದ ಚುನಾವಣೆಗೆ ಸ್ಪರ್ಧಿಸಿ 35,000 ಮತಗಳಿಂದ ಬಿಜೆಪಿ ಅಭ್ಯರ್ಥಿ ದುರ್ವಿಜಯ್ ಸಿಂಗ್ ಶಾಕ್ಯಾ ಅವರನ್ನು ಸೋಲಿಸಿದ್ದಾರೆ ಈ ಮೂಲಕ ಅಖಿಲೇಶ್ ಕುಟುಂಬದ ಐವರು ಲೋಕಸಭಾಯಲ್ಲಿ ವಿಜಯದ ಪತಾಕೆ ಹಾರಿಸಿದ್ದಾರೆ.
ಉಳಿದಂತೆ ಅಖಿಲೇಶ್ ಯಾದವ್ ಅವರ ನಿಕಟವರ್ತಿಗಳ ಪೈಕಿ ಸಮಾಜವಾದಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರು ಫತೇಪುರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಸೋಲಿಸಿದ್ದಾರೆ. ಅದೇ ರೀತಿ, ಅಖಿಲೇಶ್ ಯಾದವ್ ಅವರ ನಿಕಟವರ್ತಿಯಲ್ಲಿ ಒಬ್ಬರಾಗಿರುವ ಆನಂದ್ ಭದೌರಿಯಾ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ರೇಖಾ ವರ್ಮಾ ಅವರನ್ನು ಧೌರಹರಾ ಲೋಕಸಭಾ ಕ್ಷೇತ್ರದಿಂದ ಸೋಲಿಸಿದ್ದಾರೆ.
ಅಯೋಧ್ಯೆಯಲ್ಲಿ ಗೆಲುವು ದಾಖಲಿಸುವ ಮೂಲಕ ಸಮಾಜವಾದಿ ಪಕ್ಷ ದೊಡ್ಡ ರಾಜಕೀಯ ಸಂದೇಶವನ್ನು ನೀಡಲು ಪ್ರಯತ್ನಿಸಿದೆ. ಭಾರತೀಯ ಜನತಾ ಪಕ್ಷವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸಿತ್ತು. ಆದರೆ ಸಮಾಜವಾದಿ ಪಕ್ಷವು ಅಯೋಧ್ಯೆಯಲ್ಲಿ ಜಾತಿ ಸಮೀಕರಣದ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.