ನವದೆಹಲಿ: ಒಂದು ದಿನದ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಸೋಮವಾರ ನಡೆದ ತನ್ನ ಮೊದಲ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ 3 ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಅಸ್ತು ಎಂದಿದೆ.
ದಿಲ್ಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಎಲ್ಲಾ ಮಿತ್ರಪಕ್ಷಗಳ ಸಚಿವರು ಭಾಗವಹಿಸಿದ್ದರು. ಮೋದಿ 3.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ.
ದೇಶದಲ್ಲಿ ಸೂರು ಇಲ್ಲದ ಅರ್ಹ ಕುಟುಂಬಗಳ ಸಂಖ್ಯೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ವಸತಿ ಅವಶ್ಯಕತೆಗಳನ್ನು ಪೂರೈಸಲು ನೂತನ ಸರ್ಕಾರ ಮೂರು ಕೋಟಿ ಹೆಚ್ಚುವರಿ ಮನೆಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳಿಗೆ ನಿರ್ಮಿಸಿಕೊಡಲು ಅನುಮೋದನೆ ನೀಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ ಸರ್ಕಾರವು 2015-16ರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಅರ್ಹ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳುಳ್ಳ ಮನೆಗಳನ್ನು ನಿರ್ಮಿಸಿ ಕೊಟ್ಟು ಸೂರು ಇಲ್ಲದವರಿಗೆ ನೆರವಾಗುತ್ತಿದೆ.
ಹಿಂದಿನ 2 ಅವಧಿಯಲ್ಲಿ ಕಟ್ಟಿದ್ದೆಷ್ಟು?: ಬಡ ಅರ್ಹ ಕುಟುಂಬಗಳಿಗೆ ಸೂರು ಭಾಗ್ಯ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ 10 ವರ್ಷಗಳಲ್ಲಿ ಈ ಯೋಜನೆಯಡಿ ಅರ್ಹರಿಗೆ ಒಟ್ಟು 4.21 ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಈ ಎಲ್ಲಾ ಮನೆಗಳಿಗೆ ಶೌಚಾಲಯ, ಎಲ್ಪಿಜಿ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸವಲತ್ತುಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ: 'ಪಿಎಂ ಕಿಸಾನ್ ನಿಧಿ' 17ನೇ ಕಂತಿನ ಹಣ ಬಿಡುಗಡೆ ಕಡತಕ್ಕೆ ಪ್ರಧಾನಿ ಮೋದಿ ಸಹಿ - PM Kisan Nidhi