ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಇಂದಿನ ಕೊನೆಯ ಮಧ್ಯಂತರ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಆರನೇ ಬಜೆಟ್ ಆಗಿದೆ.
ಆಯವ್ಯಯ ಮಂಡಿಸಲು ಸಜ್ಜಾಗಿರುವ ಸೀತಾರಾಮ್ ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ ಆರಂಭವಾಗಲಿದೆ. ಈ ಬಜೆಟ್ ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತಿಂಗಳುಗಳಿಗೆ ಮಾತ್ರ ಅನ್ವಯವಾಗಲಿದೆ. ಚುನಾವಣೆ ಬಳಿಕ ಅಧಿಕಾರಕ್ಕೇರುವ ಸರ್ಕಾರ ಹೊಸ ಪೂರ್ಣಾವಧಿ ಬಜೆಟ್ ಮಂಡಿಸುತ್ತದೆ.
ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ಬಳಿಕ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಸಹಾಯಕ ಆರ್ಥಿಕ ಸಚಿವರೂ ಕೂಡ ಇದ್ದರು. ಆ ಬಳಿಕ ಸಂಸತ್ತಿಗೆ ಆಗಮಿಸಿರುವ ಸೀತಾರಾಮನ್ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿ, ಬಜೆಟ್ಗೆ ಒಪ್ಪಿಗೆ ಪಡೆಯಲಿದ್ದಾರೆ. 11 ಗಂಟೆಗೆ ಲೋಕಸಭೆಯಲ್ಲಿ ಲೆಕ್ಕ ಪತ್ರ ಮಂಡಿಸಲಿದ್ದಾರೆ. ಸಂಜೆ 4 ಗಂಟೆಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಬಜೆಟ್ ಕುರಿತು ಸಚಿವೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಬಜೆಟ್ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ನಿಪ್ಟಿ ಮತ್ತು ಸೆನ್ಸೆಕ್ಸ್ ಧನಾತ್ಮಕವಾಗಿ ವಹಿವಾಟು ಆರಂಭಿಸಿವೆ.