ಕೋಯಿಕ್ಕೋಡ್ (ಕೇರಳ): ದೇಶಾದ್ಯಂತ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಕೇರಳದಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಕೋಯಿಕ್ಕೋಡ್ ಜಿಲ್ಲೆಯ ವಿಜೇಶ್ (43) ಮತ್ತು ಮಲಪ್ಪುರಂ ಜಿಲ್ಲೆಯ ಮುಹಮ್ಮದ್ ಹನೀಫಾ (63) ಮೃತರೆಂದು ಗುರುತಿಸಲಾಗಿದೆ.
ಏಪ್ರಿಲ್ 27ರಂದು ಬಿಸಿಲ ಬೇಗೆಯಿಂದ ಬಳಲುತ್ತಿದ್ದ ವಿಜೇಶ್ ಕೆಲಸದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದರೆ ಕೊನೆಯುಸಿರೆಳೆದಿದ್ದಾರೆ.
ಮತ್ತೊಂದೆಡೆ, ಕಟ್ಟಡ ಕಾರ್ಮಿಕರಾಗಿದ್ದ ಹನೀಫಾ ಸಹ ಕೆಲಸ ಮಾಡುತ್ತಿದ್ದಾಗ ನಿತ್ರಾಣಗೊಂಡು ಬಿದ್ದಿದ್ದಾರೆ. ನಂತರ ಅವರನ್ನು ಮಲಪ್ಪುರಂ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಹನೀಫಾ ಕೂಡ ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸಿದೆ ಅಸುನೀಗಿದ್ದಾರೆ.
ಇವರ ಸಾವಿಗೆ ನಿರ್ಜಲೀಕರಣ ಕಾರಣ ಎಂದು ಪ್ರಾಥಮಿಕ ವರದಿಯಿಂದ ದೃಢಪಟ್ಟಿದೆ. ಆದರೂ, ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ನಿಖರವಾದ ಕಾರಣ ಹೊರಬರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತೊಂದೆಡೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಬಿಸಿಲಿನ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಈ ಸಭೆಯಲ್ಲಿ ಬಿಸಿಗಾಳಿಯ ಸಾಧ್ಯತೆಯನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ವಿವರಿಸಿದರು. ಬಹುತೇಕ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಮುನ್ನೆಚ್ಚರಿಕೆಯನ್ನು ಆಧರಿಸಿ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಮೇ 6 ರವರೆಗೆ ಮುಚ್ಚುವಂತೆ ಸೂಚಿಸಲಾಗಿದೆ.
ಇಂದು ಮತ್ತು ನಾಳೆ (ಮೇ 2 ಮತ್ತು 3) ಅಲಪ್ಪುಳ, ಪಾಲಕ್ಕಾಡ್, ಕೋಯಿಕ್ಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಬಿಸಿಗಾಳಿಯು ಇರುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಸಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮತ್ತು ಕೋಯಿಕ್ಕೋಡ್, ತ್ರಿಶೂರ್ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಎಚ್ಚರಿಕೆ ನೀಡಲಾಗಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.
ಬಿಸಿಲು ಮತ್ತು ಸೆಕೆಯ ಬೇಗೆಗೆ ಜನತೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಸನ್ ಸ್ಟ್ರೋಕ್ ಸಾವಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಅಧಿಕ ಎಚ್ಚರಿಕೆ ಅಗತ್ಯ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಕೆಂಡವಾಗುತ್ತಿರುವ ಸೂರ್ಯ; ನಲ್ಗೊಂಡ ಜಿಲ್ಲೆಯಲ್ಲಿ 46 ಡಿಗ್ರಿ ತಾಪಮಾನ ದಾಖಲು