ನವದೆಹಲಿ: ಅಂತಾರಾಜ್ಯ ಶಸ್ತ್ರಾಸ್ತ್ರ ಮಾರಾಟ ಗ್ಯಾಂಗ್ನ ಇಬ್ಬರು ಸದಸ್ಯರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಇವರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಮಧ್ಯಪ್ರದೇಶದ ಖಾರ್ಗೋನ್ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅವನ್ನು ದೆಹಲಿ, ಎನ್ಸಿಆರ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳನ್ನು ಉತ್ತರ ಪ್ರದೇಶದ ಅರವಿಂದ್ ಕುಮಾರ್ (45) ಮತ್ತು ವಿನೋದ್ ಕುಮಾರ್ (48) ಎಂದು ಗುರುತಿಸಲಾಗಿದ್ದು, ಅವರಿಂದ ಎಂಟು ದೇಶೀಯ ನಿರ್ಮಿತ 0.32 ಬೋರ್ ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 19 ರಂದು ಇಬ್ಬರು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರು ಜೈತ್ ಪುರದ ಆಗ್ರಾ ಕಾಲುವೆ ರಸ್ತೆಯ ಬಳಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಲುಪಿಸಲಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಸುಳಿವಿನ ಆಧಾರದ ಮೇಲೆ ಆರೊಪಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಂಡದವರು ಕಾಲುವೆ ರಸ್ತೆಯ ಬಳಿ ಹೊಂಚು ಹಾಕಿ ಕುಳಿತು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಎಂಟು ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಮಿತ್ ಕೌಶಿಕ್ ತಿಳಿಸಿದರು.
ಬಂಧಿತ ಆರೋಪಿಗಳು ಕಳೆದ ಎಂಟು ವರ್ಷಗಳಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು. ಮಧ್ಯಪ್ರದೇಶದ ಖಾರ್ಗೋನ್ ಮೂಲದ ಅಕ್ರಮ ಶಸ್ತ್ರಾಸ್ತ್ರ ತಯಾರಕರೊಂದಿಗೆ ಅವರು ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
"ಆರೋಪಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಶಸ್ತ್ರಾಸ್ತ್ರಗಳ ಪೂರೈಕೆದಾರರು ಮತ್ತು ಅವನ್ನು ಕೊಳ್ಳುವವರನ್ನು ಸಂಪರ್ಕಿಸುತ್ತಿದ್ದರು. ಪ್ರತಿಯೊಂದು ಪಿಸ್ತೂಲ್ ಅನ್ನು 12,000 ರಿಂದ 15,000 ರೂ.ಗೆ ಖರೀದಿಸಿ ಅದನ್ನು 25,000 ರಿಂದ 30,000 ರೂ.ಗೆ ಮಾರಾಟ ಮಾಡುತ್ತಿದ್ದರು" ಎಂದು ಡಿಸಿಪಿ ಹೇಳಿದರು.
ಪ್ರತಿ ಪಿಸ್ತೂಲ್ ಒಂದಕ್ಕೆ 40,000 ರೂ.ಗಳ ಲಾಭದಾಯಕ ದರದಲ್ಲಿ ಶಸ್ತ್ರಾಸ್ತ್ರ ಪೂರೈಸುವಂತೆ ಕಳೆದ ವಾರ ದೆಹಲಿ ಮೂಲದ ಕುಖ್ಯಾತ ದರೋಡೆಕೋರನೊಬ್ಬನ ಸಹಚರನಿಂದ ಇವರಿಗೆ ಆರ್ಡರ್ ಸಿಕ್ಕಿತ್ತು ಎಂದು ಕೌಶಿಕ್ ಹೇಳಿದರು. ಆರೋಪಿ ಅರವಿಂದ್ ಈ ಹಿಂದೆ ಯುಪಿ ಮತ್ತು ದೆಹಲಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಮಿತ್ ಕೌಶಿಕ್ ಹೇಳಿದರು.
ಇದನ್ನೂ ಓದಿ : 2026 ರ ವೇಳೆಗೆ ನಕ್ಸಲ್ವಾದಕ್ಕೆ ತಿಲಾಂಜಲಿ, ಕಾಶ್ಮೀರದಲ್ಲಿ ಏಕಾಂಗಿ ಹೋರಾಟ: ಅಮಿತ್ ಶಾ - Amit Shah on extremism