ಈರೋಡ್/ಚೆನ್ನೈ (ತಮಿಳುನಾಡು): ಕೊಯಮತ್ತೂರಿನಿಂದ ಸೇಲಂಗೆ ಚಿನ್ನಾಭರಣ ಸಾಗಿಸುತ್ತಿದ್ದ ವಾಹನವೊಂದು ಅಪಘಾತಕ್ಕೀಡಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಚಿತ್ತೋಡ್ ಪೊಲೀಸರು ಸಶಸ್ತ್ರ ಪೊಲೀಸರ ಮೂಲಕ ಪರ್ಯಾಯ ವಾಹನದಲ್ಲಿ ಚಿನ್ನಾಭರಣವನ್ನು ಸೇಲಂಗೆ ವಾಪಸ್ ಕಳುಹಿಸಿದ್ದಾರೆ.
ಚಿತ್ತೋಡ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸೇಲಂ - ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ವೆಲ್ ಲಾಜಿಸ್ಟಿಕ್ಸ್ ಹೆಸರಿನ ಟ್ರಕ್ ಕೊಯಮತ್ತೂರಿನಿಂದ ಸೇಲಂಗೆ ತೆರಳುತ್ತಿತ್ತು. ಟ್ರಕ್‌ನಲ್ಲಿ ಚಿನ್ನಾಭರಣಗಳು ಮತ್ತು ವಿವಿಧ ಖಾಸಗಿ ಆಭರಣ ಮಳಿಗೆಗಳಿಗೆ ಕಳುಹಿಸಲು ಚಿನ್ನದ ಆಭರಣಗಳು, ಗಟ್ಟಿ ಸೇರಿದಂತೆ ಇತರ ಚಿನ್ನದ ಸಾಮಗ್ರಿಗಳನ್ನು ತುಂಬಲಾಗಿತ್ತು. ಈ ಟ್ರಕ್‌ನಲ್ಲಿ ಒಂದಲ್ಲ ಎರಡಲ್ಲ, ಲಕ್ಷವೂ ಅಲ್ಲ, ನೂರಾರು ಕೋಟಿ ಮೌಲ್ಯದ ಬಂಗಾರ ಇತ್ತು. ಸುಮಾರು 810 ಕೆಜಿ ತೂಕದ ಈ ಚಿನ್ನ ಟ್ರಕ್ನಲ್ಲಿತ್ತು. ಇದರ ಒಟ್ಟಾರೆ ಮೌಲ್ಯ ಸುಮಾರು 666 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಚಾಲಕ ಶಶಿಕುಮಾರ್ (29) ಲಾರಿ ಚಾಲನೆ ಮಾಡುತ್ತಿದ್ದು, ಬಂದೂಕು ಹಿಡಿದ ಅಂಗರಕ್ಷಕ ಪಾಲ್ರಾಜ್ (40) ಮತ್ತು ಸಹಾಯಕ ನವೀನ್ ( 21) ಜೊತೆಗಿದ್ದರು. ಸೇಲಂ ಕಡೆಗೆ ಹೋಗುತ್ತಿದ್ದ ವಾಹನ ತಿರುವಿನಲ್ಲಿ ಹೋಗುತ್ತಿದ್ದಾಗ ಪಲ್ಟಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಸರಕು ಸಾಗಣೆ ವಾಹನದ ಚಾಲಕ ಶಶಿಕುಮಾರ್ ಮತ್ತು ಭದ್ರತಾ ಸಿಬ್ಬಂದಿ ಪಾಲ್ರಾಜ್ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಚಿತ್ತೋಡ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಚಾಲಕ ಶಶಿಕುಮಾರ್ ಮತ್ತು ಸೆಕ್ಯೂರಿಟಿ ಗಾರ್ಡ್ ಪಾಲ್ರಾಜ್ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಭವಾನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಸರಕು ಸಾಗಣೆ ವಾಹನವನ್ನು ಚಿನ್ನಾಭರಣದೊಂದಿಗೆ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಆ ಬಳಿಕ ವಾಣಿಜ್ಯ ತೆರಿಗೆ ಅಧಿಕಾರಿಗಳ ತಪಾಸಣೆ ನಡೆಸಿದರು. ಅಧಿಕಾರಿಗಳ ತಪಾಸಣೆ ಬಳಿಕ ಬದಲಿ ವಾಹನದಲ್ಲಿ ಶಸ್ತ್ರಸಜ್ಜಿತ ಪೊಲೀಸರೊಂದಿಗೆ ಚಿನ್ನಾಭರಣವನ್ನು ಸೇಲಂಗೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಅಪಘಾತದ ಕುರಿತು ಚಿತ್ತೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಈ ವಾರ 340 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್ಅಪ್ಗಳು - startup funding