ಅಗರ್ತಲಾ: ಪ್ರವಾಹಕ್ಕೆ ತುತ್ತಾಗಿರುವ ತ್ರಿಪುರಾ ಸಂಪೂರ್ಣ ರಾಜ್ಯವನ್ನು ನೈಸರ್ಗಿಕ ವಿಕೋಪ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಭಾರೀ ಪ್ರವಾಹದಿಂದಾಗಿ ರಾಜ್ಯದಲ್ಲಿ ಜನ-ಜಾನುವಾರು ನಷ್ಟವಾಗಿದ್ದು, ಅಧಿಕ ಮಟ್ಟದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದ್ದು, ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪದ ಪರಿಣಾಮಕ್ಕೆ ಒಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯವು ಹಿಂದೆಂದೂ ಕಂಡರಿಯದ ಪ್ರವಾಹಕ್ಕೆ ತುತ್ತಾಗಿದೆ. ಇದು ಜನರ ಜೀವನ ಅಸ್ತವ್ಯಸ್ತ, ಆಸ್ತಿಪಾಸ್ತಿ ನಷ್ಟ ಮತ್ತು ಭಾರೀ ಹಾನಿ ಜೊತೆಗೆ ಸಾರ್ವಜನಿಕ ಮತ್ತು ಖಾಸಗಿ ಮೂಲ ಸೌಕರ್ಯಗಳನ್ನು ಹಾಳು ಮಾಡಿದೆ. ಪ್ರವಾಹ ವಾತಾವರಣದಿಂದಾಗಿ 31 ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರೆ, ಒಬ್ಬರು ಕಣ್ಮರೆಯಾಗಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, 15 ಸಾವಿರ ಕೋಟಿ ರೂ. ಹಾನಿಯುಂಟಾಗಿದೆ ಎಂದು ಪರಿಹಾರ, ಪುನರ್ವಸತಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಬ್ರಿಜೇಶ್ ಪಾಂಡೆ ತಿಳಿಸಿದ್ದಾರೆ.
ರಾಜ್ಯದಲ್ಲಿನ ಪರಿಸ್ಥಿತಿ ಗಮನಿಸಿ, ಜನರ ಸಾವು ಹಾಗೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾನಿ ಪರಿಗಣಿಸಿ ತ್ರಿಪುರಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯದರ್ಶಿ ಸಮಿತಿ (ಎಸ್ಇಸಿ) ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಆಗಸ್ಟ್ 24ರಂದು ಸಭೆ ನಡೆಸಿದ್ದರು. ಆಗ ಇಡೀ ರಾಜ್ಯವನ್ನು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ ಎಂದು ಘೋಷಿಸಲು ನಿರ್ಧರಿಸಲಾಗಿತ್ತು.
ಕಂಡರಿಯದ ಪ್ರವಾಹದಿಂದಾಗಿ ರಾಜ್ಯವನ್ನು ನೈಸರ್ಗಿಕ ವಿಕೋಪ ಪರಿಣಾಮಕ್ಕೆ ಒಳಗಾದ ಪ್ರದೇಶ ಎಂದು ಇಡೀ ರಾಜ್ಯವನ್ನು ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯದ ಮನವಿ ಮೇರೆಗೆ ಕೇಂದ್ರ ಸರ್ಕಾರ ಇಲ್ಲಿನ ಪರಿಸ್ಥಿತಿ ಅವಲೋಕಿಸಿ ಪ್ರವಾಹದ ಹಾನಿ ಅಂದಾಜಿಸಿ, ಪರಿಹಾರ ನೀಡಲು ಐವರು ಸದಸ್ಯರ ತಂಡವನ್ನು ಕಳುಹಿಸಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ 53,356 ಮಂದಿ 359 ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಈ ಸಂತ್ರಸ್ತರಿಗೆ ಮನೆ ಪುನರ್ನಿಮಾಣಕ್ಕೆ ಸಹಾಯ ಮಾಡಲು ಈಗಾಗಲೇ ಆಡಳಿತವು ಪರಿಹಾರ ಸಹಾಯ ಬಿಡುಗಡೆ ಕೆಲಸ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೊನಮುರಾದ ಗೋಮತಿ ನದಿಯ ನೀರಿನ ಮಟ್ಟ ಅಪಾಯದಿಂದ ಕೆಳಗೆ ಇಳಿದಿದ್ದರೂ ಪ್ರವಾಹದ ಹರಿವು ಮುಂದುವರೆದಿದೆ. ಗೋಮತಿ ಮತ್ತು ಸೆಪಜಿಜಲ್ ಜಿಲ್ಲೆಗಳಲ್ಲಿ 2 ಎಸ್ಡಿಆರ್ಎಫ್ ಮತ್ತು 2 ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೊತೆಗೆ ನಾಗರಿಕ ರಕ್ಷಣಾ ಸ್ವಯಂ ಕಾರ್ಯಕರ್ತರ ತಂಡ ಹಾಗೂ ಅಪದ್ ಮಿತ್ರಾ ಕೂಡ ಈ ರಕ್ಷಣಾ ಕಾರ್ಯದಲ್ಲಿ ಜೊತೆಯಾಗಿದೆ.
ಉನ್ನತ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಣೆ ನಡೆಸಲಾಗುತ್ತಿದೆ, ಜನರಿಗೆ ಸುದ್ಧ ನೀರಿನ ಕುಡಿಯುವ ಪೂರೈಕೆ ಸೇರಿದಂತೆ ರೋಗ ಹರಡದಂತೆ ನಿರಾಶ್ರಿತ ಕೇಂದ್ರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ. ನಿರಾಶ್ರಿತ ಕೇಂದ್ರಗಳಲ್ಲಿ ಇಲ್ಲಿಯವರೆಗೆ 1107 ಬಾರಿ ವೈದ್ಯರು ಭೇಟಿ ನೀಡಿದ್ದು, 35,477ಮಂದಿಯನ್ನು ಪರೀಕ್ಷಿಸಲಾಗಿದೆ. 1,650 ಹೆಲ್ತ್ ಕ್ಯಾಂಪ್ ಮೂಲಕ 45,00 ಜನರ ಪರೀಕ್ಷೆ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಾಗುತ್ತಿದೆ. (ಪಿಟಿಐ/ಎಎನ್ಐ)
ಇದನ್ನೂ ಓದಿ: ತ್ರಿಪುರಾದಲ್ಲಿ ಭಾರೀ ಮಳೆಯಿಂದ ಭೂ ಕುಸಿತ: 7 ಮಂದಿ ಸಾವು