ಪೆದ್ದಪಲ್ಲಿ (ಆಂಧ್ರಪ್ರದೇಶ): ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಒಡಿಶಾ ಮೂಲದ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಎಂಎಸ್‌ಆರ್ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 19 ಕಾರ್ಮಿಕರು ಕಲುಷಿತ ನೀರು, ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು, ಅವರನ್ನು ಕರೀಂನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಉಳಿದ 16 ಕಾರ್ಮಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಟ್ಟಿಗೆ ಭಟ್ಟಿ ಮಾಲೀಕರ ನಿರ್ಲಕ್ಷ್ಯದಿಂದ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತರ ಕಾರ್ಮಿಕರು ಆಗ್ರಹಿಸಿದ್ದಾರೆ. ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಡಿಶಾದಲ್ಲಿ ಉಸಿರುಗಟ್ಟಿ ನಾಲ್ವರು ಸಾವು: ಮತ್ತೊಂದೆಡೆ, ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಕಾಂತಾಬಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾಂಗ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 7 ವರ್ಷದ ಬಾಲಕ ಸೇರಿ ನಾಲ್ವರು ಇಟ್ಟಿಗೆ ಭಟ್ಟಿಗೆ ಬೆಂಕಿ ಹಚ್ಚಿ ಮಲಗಿದ್ದರು. ಈ ವೇಳೆ, ಇಟ್ಟಿಗೆ ಗೂಡಿನ ಬೆಂಕಿಯಿಂದ ಬಂದ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಬೆಳಗ್ಗೆಯಾದರೂ ಮಲಗಿದ್ದನ್ನು ಕಂಡ ಸ್ಥಳೀಯರು ತಕ್ಷಣ ಅವರೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿದ್ದರು. ಆದರೆ, ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತರೆಲ್ಲರೂ ಛತ್ತೀಸ್ಗಢ ಮೂಲದವರಾಗಿದ್ದು, ಸ್ಥಳಕ್ಕೆ ಕಾಂತಾಬಾನಿಯಾ ಠಾಣಾ ಪೊಲೀಸರು ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಇಟ್ಟಿಗೆ ಭಟ್ಟಿಯಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವು