ಶ್ರೀನಗರ: ಕಳೆದ 7 ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದ ವಿನಾಶಕ್ಕೆ ಕಾರಣವಾಗಿರುವವರು ಈ ಮೂರು ಕುಟುಂಬದ ರಾಜಕೀಯ ಪಕ್ಷಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ದಶಕಗಳ ಬಳಿಕ ಚುನಾವಣೆ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಮತದಾನಕ್ಕೆ ಮುನ್ನ ಕಾಶ್ಮೀರದ ಶೇರಿ ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅವರು ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆ ಕಾಂಗ್ರೆಸ್, ಎನ್ಸಿ ಮತ್ತು ಪಿಡಿಪಿ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರ ಜನರ ಭವಿಷ್ಯವನ್ನು ನಾಶ ಮಾಡಿ, ರಾಜಕೀಯ ವೃತ್ತಿ ನಿರ್ಮಾಣ ಮಾಡಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಅವನತಿಗೆ ಈ ಮೂರು ಕುಟುಂಬಗಳೇ ಜವಾಬ್ದಾರಿ ಎಂದು ನೇರಾ ನೇರ ಆರೋಪ ಮಾಡಿದರು.
’ನಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು’: ಅವರು, ಯಾರಾದರೂ ಹೇಗೆ ನಮ್ಮನ್ನು ಪ್ರಶ್ನಿಸಲು ಸಾಧ್ಯ ಎಂದು ಭಾವಿಸಿದ್ದರು. ಅವರು ಹೇಗಾದರೂ ಮಾಡಿ ಕುರ್ಚಿ ಪಡೆದು, ನಿಮ್ಮ ಜನ್ಮ ಹಕ್ಕನ್ನು ಕಸಿಯುವ ಮತ್ತು ಜನರ ಹಕ್ಕನ್ನು ಕಸಿಯುವುದು ತಮ್ಮ ರಾಜಕೀಯ ಹಕ್ಕು ಎಂದು ಭಾವಿಸಿದ್ದರು. ಅವರು ಜನರಿಗೆ ಕೇವಲ ಭಯ ಮತ್ತು ಅನಿಶ್ಚಿತತೆಯನ್ನೇ ಬಿತ್ತಿದರು. ಆದರೆ, ಇದೀಗ ಜನರು ಅವರ ಈ ಜಾಲಕ್ಕೆ ಬೀಳುವುದಿಲ್ಲ. ಇದೀಗ ಇಲ್ಲಿನ ಯುವಕರು ಅವರಿಗೇ ಚಾಲೇಂಜ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಗುರುವಾರ ಬಿಗಿ ಭದ್ರತೆಯಲ್ಲಿ ಶ್ರೀನಗರದ ಸೊನ್ವಾರ್ ಶೇರ್ -ಇ - ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದರು. ಇದಾದ ಬಳಿಕ ಜಮ್ಮುವಿನಲ್ಲಿ ಬಿಎಪಿ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಲಿದ್ದಾರೆ.
ಕಣಿವೆ ರಾಜ್ಯದಲ್ಲಿ ಭಾರಿ ಬಿಗಿ ಬಂದೋಬಸ್ತ್: ಪ್ರಧಾನಿ ಆಗಮನದ ಹಿನ್ನಲೆ ಸಮಾವೇಶ ನಡೆಯುವ ಸ್ಥಳ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಲೈಟ್ ಮತ್ತು ಬಿಜೆಪಿ ಬಾವುಟಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಕಾರ್ಯಕ್ರಮವನ್ನು ಸರಾಗವಾಗಿ ನಡೆಸುವ ಉದ್ದೇಶದಿಂದ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ವಿವಿಐಪಿಗಾಗಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಮತ್ತು ವಿವಿಐಪಿಗಳ ಭೇಟಿ ಒಂದಕ್ಕೊಂದು ಸಂಪರ್ಕ ಹೊಂದಿದೆ. ಸ್ಥಳದಲ್ಲಿ ಎಲ್ಲಾ ಭದ್ರತಾ ಕ್ರಮ ನಡೆಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಕೆ ಬಿರ್ದಿ ತಿಳಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಹಿನ್ನಲೆ ಶ್ರೀನಗರದಲ್ಲಿ ನಡೆಯುತ್ತಿರುವ ಮೊದಲ ಬಿಜೆಪಿ ಸಮಾವೇಶ ಇದಾಗಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ರದ್ದು ಮಾಡಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಜಮ್ಮು ಕಾಶ್ಮೀರ ಚುನಾವಣಾ ಪ್ರಚಾರ ಕುರಿತು ಪ್ರಧಾನಿ ಮೋದಿ ಅವರು ಕೂಡ ಎಕ್ಸ್ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುತ್ತಿದ್ದು, ಶ್ರೀನಗರ ಮತ್ತು ಕತ್ರಾದಲ್ಲಿ ಸಮಾವೇಶದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದರು. ಈ ಮೊದಲು ಸೆಪ್ಟೆಂಬರ್ 14ರಂದು ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಅವರು ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನ ಹಣ 'ನಮಾಮಿ ಗಂಗೆ ಯೋಜನೆ'ಗೆ ಅರ್ಪಣೆ