ಲೋಹರ್ದಗಾ (ಜಾರ್ಖಂಡ್): ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಬಸ್ ಮತ್ತು ಹೈವಾ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.
ಮೃತರು ಮತ್ತು ಗಾಯಾಳುಗಳೆಲ್ಲರೂ ಗುಮ್ಲಾ ಜಿಲ್ಲೆಯ ಬನಾಲತ್ ಮೂಲದವರು ಎಂದು ತಿಳಿದುಬಂದಿದೆ. ಮಾಹಿತಿ ಲಭಿಸಿದ ಕೂಡಲೇ ಘಟನಾ ಸ್ಥಳಕ್ಕೆ ಕೂಡು ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಮದುವೆಯ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದರು. ಗುಮ್ಲಾ ಜಿಲ್ಲೆಯ ವಿಶುನ್‌ಪುರದ ಬನಾಲತ್‌ನಿಂದ 35ಕ್ಕೂ ಹೆಚ್ಚು ಜನರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ರಾಂಚಿ ಜಿಲ್ಲೆಯ ಕಾಂಕೆ ಪ್ರದೇಶದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಶುಕ್ರವಾರ ಸಂಜೆ ಎಲ್ಲರೂ ಕಾಂಕೆಯಿಂದ ಬನಾಲತ್‌ಗೆ ಹಿಂತಿರುಗುತ್ತಿದ್ದರು. ಆಗ ಈ ರಸ್ತೆ ಅವಘಡ ಸಂಭವಿಸಿದೆ. ಅತಿ ವೇಗದ ಹಿನ್ನೆಲೆ ಲೋಹಾರಡಗಾ ಮುಖ್ಯರಸ್ತೆಯ ಕೂಡುವಿನ ತಾಟಿ ಚೌಕ್ ಬಳಿ ಶುಕ್ರವಾರ ಸಂಜೆ ಬಸ್ ಮತ್ತು ಹೈವಾ ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಎಂಟು ತಿಂಗಳ ಮಗುವೂ ಸೇರಿದೆ. ಇನ್ನಿಬ್ಬರು ಮಕ್ಕಳಾದ ಪ್ರಿಯಾಂಕಾ ಕುಜೂರ್ ಮತ್ತು ಸುಮಂತಿ ಖೇರ್ವಾರ್ ಎಂಬುವರು ಸಹ ಮೃತಪಟ್ಟಿದ್ದಾರೆ.
ಗಾಯಗೊಂಡವರಲ್ಲಿ ಹೈವಾ ಟ್ರಕ್ ಚಾಲಕ, ಭರ್ನೋ ನಿವಾಸಿ ಇಂತಾಫ್ ಅನ್ಸಾರಿ, ವಿನಿತ್ ಓರಾನ್, ಬಲರಾಮ್ ಓರಾನ್ ಮತ್ತು ಇತರರು ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಪೈಕಿ 10ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ. ಕೂಡು ಸಿಎಸ್ಸಿಎಚ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ರಾಂಚಿ ರಿಮ್ಸ್ಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ₹10 ಕೋಟಿ ಮೌಲ್ಯದ ಚಿನ್ನ, ವಜ್ರ ಸೇರಿ ವಿದೇಶಿ ಕರೆನ್ಸಿ ವಶ - Customs Department