ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ ಕೆಲಸದ ವೇಳೆ ಆರು ಮಂದಿ ಕಾರ್ಮಿಕರು ಮತ್ತು ವೈದ್ಯನ ಹತ್ಯೆ ಮಾಡಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶ್ರೀನಗರದ ಹೊರವಲಯದಲ್ಲಿರುವ ದಚಿಗಮ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಎನ್‌ಕೌಂಟರ್ ಮಾಡಿವೆ.
ಹತನಾದ ಉಗ್ರನನ್ನು ಜುನೈದ್ ಅಹ್ಮದ್ ಭಟ್ ಗುರುತಿಸಲಾಗಿದೆ. ಈತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನು. ಈತ ಕಾಶ್ಮೀರದ ಗಗಾಂಗೀರ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ.
ದಾಳಿ ನಡೆಸಿ ಕಾರ್ಮಿಕರು ಮತ್ತು ವೈದ್ಯನನ್ನು ಬಲಿ ಪಡೆದಿದ್ದ ಉಗ್ರ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಮಂಗಳವಾರ ಪಾತಕಿ ಸೇನೆಯ ಗುಂಡೇಟಿಗೆ ಬಲಿಯಾಗಲಿದ್ದಾನೆ.
ಎಲ್ಇಟಿಗೆ ಸೇರಿದ್ದ ಉಗ್ರ: 'ಎ' ವರ್ಗದ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿದ್ದ ಜುನೈದ್ ಅಹ್ಮದ್ ಭಟ್ ಸೇನಾ ದಾಳಿಗೆ ಹತನಾಗಿದ್ದಾನೆ. ಈತ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ್ದ. ಗಗಾಂಗೀರ್, ಗಂದರ್ಬಾಲ್ ಮತ್ತಿತರ ಪ್ರದೇಶಗಳಲ್ಲಿ ನಡೆದ ದಾಳಿಗಳಲ್ಲಿ ನಾಗರಿಕರ ಹತ್ಯೆ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹತನಾದ ಉಗ್ರ ಕುಲ್ಗಾಮ್ ನಿವಾಸಿಯಾಗಿದ್ದ. ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ. ಗಂದರ್ಬಾಲ್ ದಾಳಿಯ ಸಮಯದಲ್ಲಿ ಈತ ಎಕೆ 47 ಸರಣಿಯ ಅತ್ಯಾಧುನಿಕ ರೈಫಲ್ ಅನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಈತ ಮತ್ತಷ್ಟು ವಿಧ್ವಂಸಕತೆ ಸೃಷ್ಟಿಸುವ ಭೀತಿ ಇತ್ತು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಉಗ್ರ ತಟಸ್ಥ, ಇಬ್ಬರು ಮಹಿಳೆಯರ ಬಂಧನ: ಇದೇ ಕಾರ್ಯಾಚರಣೆಯಲ್ಲಿ ಇನ್ನೊಬ್ಬ ಉಗ್ರನನ್ನು ಸುತ್ತುವರಿಯಲಾಗಿದೆ. ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರೆದಿದೆ. ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಇಬ್ಬರು ಮಹಿಳಾ ಭಯೋತ್ಪಾದಕ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ನಾಗರಿಕರಂತೆ ಇದ್ದು, ಉಗ್ರರಿಗೆ ನೆರವು ನೀಡುತ್ತಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇಬ್ಬರು ಮಹಿಳೆಯರನ್ನು ಮರ್ಯಾಮಾ ಬೇಗಂ ಮತ್ತು ಅರ್ಷದ್ ಬೇಗಂ ಎಂದು ಗುರುತಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರ ನಿಗ್ರಹಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದರು.
ಇದನ್ನೂ ಓದಿ: 'ರಾಮಾಯಣ' ನಾಟಕದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ಮಾಂಸ ಭಕ್ಷಿಸಿದ ರಾಕ್ಷಸ ಪಾತ್ರಧಾರಿ!