ಹೈದರಾಬಾದ್(ತೆಲಂಗಾಣ): ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ವಿಧಾನ ಪರಿಷತ್ ಸದಸ್ಯ ದಂಡೆ ವಿಠ್ಠಲ್ ಅವರ ಆಯ್ಕೆ 'ಅಸಿಂಧು' ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ 50 ಸಾವಿರ ದಂಡವನ್ನೂ ವಿಧಿಸಿದೆ.
ದಂಡೆ ವಿಠ್ಠಲ್ 2022ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಮುಖಂಡ ಪಟ್ಟಿರೆಡ್ಡಿ ರಾಜೇಶ್ವರ್ ರೆಡ್ಡಿ ತದನಂತರ ನಾಮಪತ್ರ ಹಿಂಪಡೆದಿದ್ದರು. ಇದಾದ ಬಳಿಕ ಅವರು ದಂಡೆ ವಿಠ್ಠಲ್ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ನಾಮನಿರ್ದೇಶನ ಮಾಡಿದ ಕಿಶನ್ ಸಿಂಗಾರಿ ಅವರು ತಮ್ಮ ಜನನ ಪ್ರಮಾಣ ಪತ್ರವನ್ನು ನಕಲಿಸಿ ನಾಮಪತ್ರ ಹಿಂಪಡೆದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ರಾಜೇಶ್ವರ್ ರೆಡ್ಡಿ ಪರ ವಕೀಲರು ವಾದಿಸಿದ್ದರು. ರಾಜೇಶ್ವರ್ ರೆಡ್ಡಿ ಅವರ ಅರ್ಜಿಯ ಮೇಲಿನ ಸಹಿ ಮತ್ತು ನಾಮಪತ್ರ ಹಿಂಪಡೆದ ದಾಖಲೆಗಳ ಮೇಲಿನ ಸಹಿಯನ್ನು ಹೈಕೋರ್ಟ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದರ ವರದಿ ಬಂದ ಬಳಿಕ ಕೋರ್ಟ್ ತೀರ್ಪು ನೀಡಿದೆ.
ಇದಕ್ಕೂ ಮುನ್ನ ಸಾಕ್ಷಿಗಳ ವಿಚಾರಣೆ ಮತ್ತು ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಸುಪ್ರೀಂ ಕೋರ್ಟ್ ಮೊರೆ ಹೋಗಲಿರುವ ದಂಡೆ ವಿಠ್ಠಲ್: ಹೈಕೋರ್ಟ್ ತೀರ್ಪಿನ ಬಗ್ಗೆ ದಂಡೆ ವಿಠ್ಠಲ್ ಪ್ರತಿಕ್ರಿಯಿಸಿದ್ದಾರೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದರು. "ಬೇರೆ ಅಭ್ಯರ್ಥಿಯ ನಾಮಪತ್ರ ಹಿಂಪಡೆಯುವಿಕೆ ಸರಿಯಾಗಿ ಆಗದ ಕಾರಣ ಈ ತೀರ್ಪು ಬಂದಿದೆ. ಬೇರೆ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವುದಕ್ಕೂ ನನಗೂ ಸಂಬಂಧವಿಲ್ಲ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವಿದೆ" ಎಂದರು. ಹೈಕೋರ್ಟ್ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ: ಈಗಲೇ ತ್ವರೆ ಮಾಡಿ - Village accountant recruitment