ಐಜ್ವಾಲ್(ಮಿಜೋರಾಂ): ಕಳೆದ ಎಂಟೂವರೆ ತಿಂಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಹರಡಿದ ಬಳಿಕ ಮಿಜೋರಾಂನಲ್ಲಿ 14,310ಕ್ಕೂ ಅಧಿಕ ಹಂದಿಗಳು ಮೃತಪಟ್ಟಿದ್ದು, 23,720ಕ್ಕೂ ಅಧಿಕ ಹಂದಿಗಳನ್ನು ಕೊಲ್ಲಲಾಗಿದೆ. ಆದಾಗ್ಯೂ ಕಳೆದ ಕೆಲವು ದಿನಗಳಲ್ಲಿ ಹಂದಿ ಜ್ವರ ರೋಗದಿಂದ ಹಂದಿಗಳ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ರಾಜ್ಯಾದ್ಯಂತ ಎಎಸ್ಎಫ್ ಅಲೆ ಕಾಣಿಸಿಕೊಂಡಿದ್ದರಿಂದ ಬಹಳಷ್ಟು ಸಂಖ್ಯೆಯ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ಮಿಜೋರಾಂ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ (ಎಎಚ್ವಿ) ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಎಎಸ್ಎಫ್ನಿಂದಾಗಿ ಹಂದಿಗಳ ಸಾವಿನ ತೀವ್ರತೆ ಕಡಿಮೆಯಾಗಿರುವುದು ಸದ್ಯ ಸಮಾಧಾನದ ವಿಷಯವಾಗಿದೆ. ಸೋಮವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 52 ಹಂದಿಗಳು ಸಾವನ್ನಪ್ಪಿದ್ದು, 26 ಹಂದಿಗಳನ್ನು ಕೊಲ್ಲಲಾಗಿದೆ. ಈ ಮೊದಲು ಹಂದಿಗಳ ಸಾವು ಮತ್ತು ಕೊಲ್ಲುವಿಕೆಯ ಪ್ರಮಾಣ ತುಂಬಾ ಹೆಚ್ಚಾಗಿತ್ತು" ಎಂದು ಎಎಚ್ವಿ ಇಲಾಖೆಯ ಅಧಿಕಾರಿಯೊಬ್ಬರು ಐಎಎನ್ಎಸ್‌ಗೆ ತಿಳಿಸಿದರು.
ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರ ಪ್ರಕಾರ, ಹವಾಮಾನದಲ್ಲಿ ಉಷ್ಣಾಂಶ ಹೆಚ್ಚಾದಾಗ ಮತ್ತು ರಾಜ್ಯದಲ್ಲಿ ಮಾನ್ಸೂನ್ ಪೂರ್ವ ಮಳೆ ಪ್ರಾರಂಭವಾದಾಗ ಎಎಸ್ಎಫ್ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಚಳಿಗಾಲದ ಆರಂಭದಲ್ಲಿ ಮತ್ತು ಇಡೀ ಚಳಿಗಾಲದ ಅವಧಿಯಲ್ಲಿ ಎಎಸ್ಎಫ್ನಿಂದ ಉಂಟಾಗುವ ಸಾವುಗಳ ಸಂಖ್ಯೆ ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದರು.
ಅನಧಿಕೃತ ಅಂದಾಜಿನ ಪ್ರಕಾರ, ಫೆಬ್ರವರಿ 9ರಿಂದ ಈ ಸಾಂಕ್ರಾಮಿಕ ರೋಗದ ಹರಡುವಿಕೆಯಿಂದಾಗಿ ರಾಜ್ಯದ 11 ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳಲ್ಲಿ ಹಂದಿ ಸಾಕಣೆದಾರರು ಈ ವರ್ಷ ಸುಮಾರು 190 ಕೋಟಿ ರೂ.ಗಳ ಭಾರಿ ನಷ್ಟ ಅನುಭವಿಸಿದ್ದಾರೆ. ಎಎಚ್ವಿ ಇಲಾಖೆ ಅಧಿಕಾರಿಗಳ ಪ್ರಕಾರ, 2021ರಲ್ಲಿ ಎಎಸ್ಎಫ್ ಸಾಂಕ್ರಾಮಿಕ ರೋಗದಿಂದಾಗಿ 33,420 ಹಂದಿಗಳು ಮತ್ತು ಹಂದಿಮರಿಗಳು ಸಾವನ್ನಪ್ಪಿದ್ದರೆ, 2022 ರಲ್ಲಿ 12,800 ಹಂದಿಗಳು ಮತ್ತು ಹಂದಿಮರಿಗಳು ಮತ್ತು 2023 ರಲ್ಲಿ 1,040 ಹಂದಿಗಳು ಸಾವನ್ನಪ್ಪಿವೆ.
2021ರ ಮಾರ್ಚ್ ಮಧ್ಯದಲ್ಲಿ ಬಾಂಗ್ಲಾದೇಶದ ಗಡಿಯ ಲುಂಗ್ಲೈ ಜಿಲ್ಲೆಯ ಲುಂಗ್ಸೆನ್ ಗ್ರಾಮದಲ್ಲಿ ಮೊದಲ ಎಎಸ್ಎಫ್ ಪ್ರಕರಣ ದಾಖಲಾಗಿತ್ತು. ಅಂದಿನಿಂದ, ರೋಗವು ಪ್ರತಿವರ್ಷ ಮರುಕಳಿಸುತ್ತಿದೆ. ಈ ವರ್ಷದ ಮೊದಲ ಎಎಸ್ಎಫ್ ಪ್ರಕರಣ ಫೆಬ್ರವರಿ 9ರಂದು ಚಂಫೈ ಜಿಲ್ಲೆಯ ಲೈತುಮ್ ಗ್ರಾಮದಲ್ಲಿ ವರದಿಯಾಗಿದೆ. ಈ ಗ್ರಾಮವು ಮ್ಯಾನ್ಮಾರ್ನ ಮುಕ್ತ ಗಡಿಯಲ್ಲಿದೆ.
ಇದನ್ನೂ ಓದಿ: 2025ರಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಸಿದ್ಧತೆ: ಜಾತಿ ಗಣತಿ ಗೊಂದಲ ಮುಂದುವರಿಕೆ