ನವದೆಹಲಿ: ಭಾರತದ ಚುನಾವಣಾ ಆಯೋಗ (ಇಸಿಐ)ವು ಗುರುವಾರ ನವೀಕರಿಸಿದ (ಅಪ್ಡೇಟ್ ಮಾಡಲಾದ) ಸುವಿಧಾ 2.0 ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಪ್ರಚಾರ ಸಂಬಂಧಿತ ಅನುಮತಿಗಳನ್ನು ಪಡೆಯುವುದನ್ನು ಸುಲಭವಾಗಿಸಲಿದೆ. ಮೊಬೈಲ್ ಸಾಧನ ಹೊಂದಿರುವ ಬಳಕೆದಾರರು ಈ ಆ್ಯಪ್ ಬಳಸಿ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಬಹುದು, ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಅನುಮತಿ ಪತ್ರಗಳನ್ನು ಡೌನ್ಲೋಡ್ ಮಾಡಬಹುದು.
ಅಧಿಕೃತ ಇಸಿಐ ಹೇಳಿಕೆಯ ಪ್ರಕಾರ, ಅಭ್ಯರ್ಥಿಗಳು ಮತ್ತು ಪಕ್ಷಗಳು ಈಗ ಹೆಚ್ಚಿನ ಅನುಕೂಲತೆಯನ್ನು ಹೊಂದಿರುವ ಹೊಸ ಮತ್ತು ನವೀಕರಿಸಿದ ಸುವಿಧಾ 2.0 ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಚಾರ ಸಂಬಂಧಿತ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಬಹುದು. ಈ ಮೊದಲು, ಅಭ್ಯರ್ಥಿಗಳು ಮತ್ತು ಪಕ್ಷಗಳು ಮೊಬೈಲ್ ಅಪ್ಲಿಕೇಶನ್ನಲ್ಲಿ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಮತ್ತು ಅನುಮತಿ ಪತ್ರಗಳನ್ನು ಡೌನ್ಲೋಡ್ ಮಾಡಲು ಮಾತ್ರ ಸಾಧ್ಯವಿತ್ತು. ಅಲ್ಲದೆ ಅನುಮತಿ ಪಡೆಯಲು ಅರ್ಜಿಗಳನ್ನು ಖುದ್ದಾಗಿ ಅಥವಾ ವೆಬ್ ಆಧಾರಿತ ಪೋರ್ಟಲ್ ಮೂಲಕ ಮಾತ್ರ ಸಲ್ಲಿಸಬಹುದಾಗಿತ್ತು. ಆದರೆ ಈಗ ಈ ಎಲ್ಲ ಕೆಲಸಗಳನ್ನು ಸುವಿಧಾ 2.0 ಆ್ಯಪ್ ಮೂಲಕವೇ ಮಾಡಬಹುದು.
ಬೆರಳ ತುದಿಯಲ್ಲಿ ನೋಡಬಹುದು: ಅಪ್ಡೇಟ್ ಮಾಡಲಾಗಿರುವ ಸುವಿಧಾ ಅಪ್ಲಿಕೇಶನ್ ಪ್ರಚಾರ ಸಂಬಂಧಿತ ಎಲ್ಲ ಅನುಮತಿಗಳನ್ನು ಹುಡುಕುವ, ಟ್ರ್ಯಾಕ್ ಮಾಡುವ ಮತ್ತು ಡೌನ್ಲೋಡ್ ಮಾಡುವ ಒನ್-ಸ್ಟಾಪ್ ಆ್ಯಪ್ ಆಗಿದೆ. ಪತ್ರಿಕಾ ಪ್ರಕಟಣೆಗಳು ಮತ್ತು ಇತ್ತೀಚಿನ ಸೂಚನೆಗಳು / ಆದೇಶಗಳಂತಹ ಇಸಿಐನ ಹೊಸ ಅಧಿಸೂಚನೆಗಳನ್ನು ಬೆರಳ ತುದಿಯಲ್ಲಿ ನೋಡಬಹುದು. ಫಸ್ಟ್ ಇನ್ ಫಸ್ಟ್ ಔಟ್ ತತ್ವದ ಮೇಲೆ ಕಾರ್ಯನಿರ್ವಹಿಸುವ ಪ್ಲಾಟ್ ಫಾರ್ಮ್ ಅನುಮತಿಗಳನ್ನು ನೀಡುವ ಪ್ರಕ್ರಿಯೆಯು ಪಾರದರ್ಶಕವಾಗಿರುವಂತೆ ಖಚಿತಪಡಿಸುತ್ತದೆ.
ಮೊಬೈಲ್ ಫೋನ್ಗಳಿಂದಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು: ಹೊಸ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಸಿಇಸಿ ರಾಜೀವ್ ಕುಮಾರ್, ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಸಮಾನ ಅವಕಾಶ ಒದಗಿಸಲು ಆಯೋಗವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಮತ್ತು ಸುವಿಧಾ 2.0 ಬಿಡುಗಡೆಯು ತಾಂತ್ರಿಕವಾಗಿ ಸಶಕ್ತ ಚುನಾವಣೆಯತ್ತ ಮತ್ತೊಂದು ಹೆಜ್ಜೆಯಾಗಿದೆ. ಚುನಾವಣೆಯ ಸಮಯದಲ್ಲಿ ಸದಾ ಪಯಣದಲ್ಲಿರುವ ಅಭ್ಯರ್ಥಿಗಳು ಈಗ ತಮ್ಮ ಮೊಬೈಲ್ ಫೋನ್ಗಳಿಂದಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಮತ್ತು ಅನುಮತಿಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಹೇಳಿದರು.
ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು: ಸುವಿಧಾ 2.0 ಮೊಬೈಲ್ ಅಪ್ಲಿಕೇಶನ್ನಿಂದ ಬಳಕೆದಾರರು ಪ್ರಚಾರ ಸಂಬಂಧಿತ ಅನುಮತಿಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಅರ್ಜಿ ನಮೂನೆಗಳು, ಘೋಷಣೆಗಳು ಮತ್ತು ಇತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಿದಾಗ ನೀಡಲಾಗುವ ರೆಫರೆನ್ಸ್ ಐಡಿ ಬಳಸಿ ತಮ್ಮ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಅನುಮತಿ ಕೋರಿದ ಅರ್ಜಿ ಬಗ್ಗೆ ನಿರ್ಧಾರ ತೆಗೆದುಕೊಂಡ ನಂತರ, ವಿನಂತಿಯ ಆದೇಶದ ಪ್ರತಿಯನ್ನು ಕೂಡ ಅಪ್ಲಿಕೇಶನ್ನಿಂದ ಡೌನ್ಲೋಡ್ ಮಾಡಬಹುದು.
ನಾಮನಿರ್ದೇಶನದ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು, ಚುನಾವಣಾ ವೇಳಾಪಟ್ಟಿಗಳು ಮತ್ತು ನಿಯಮಿತ ಪ್ರಕಟಣೆಗಳಂಥ ಅನೇಕ ಇತರ ವೈಶಿಷ್ಟ್ಯಗಳನ್ನು ಹೊಂದಿರುವ ಈ ಆ್ಯಪ್ ಬಳಕೆದಾರರಿಗೆ ಅನುಕೂಲಕರವಾಗಿದೆ. ಈ ಹಿಂದೆ ಇದೆಲ್ಲ ಇಸಿಐ ವೆಬ್ಸೈಟ್ನಲ್ಲಿ ಮಾತ್ರ ಲಭ್ಯವಿತ್ತು. ಸುವಿಧಾ 2.0 ಮೊಬೈಲ್ ಅಪ್ಲಿಕೇಶನ್ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ ಮತ್ತು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : ಮಹಾ ಚುನಾವಣೆ - ವರ್ಲಿ ಕ್ಷೇತ್ರ: ಆದಿತ್ಯ ಠಾಕ್ರೆ ವಿರುದ್ಧ ಶಿಂದೆ ಶಿವಸೇನಾದಿಂದ ಮಿಲಿಂದ ದಿಯೋರಾ ಕಣಕ್ಕೆ