ಬನಿಹಾಲ್/ಜಮ್ಮು: ಇಲ್ಲಿನ ರಾಂಬಾನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನ ಜಾವ ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. "ಈ ಕಾರು ಶ್ರೀನಗರದಿಂದ ಜಮ್ಮುವಿಗೆ ಹೋಗುತ್ತಿತ್ತು. ಬ್ಯಾಟರಿ ಚಶ್ಮಾ ಎಂಬ ಪ್ರದೇಶದಲ್ಲಿ ಅಂದಾಜು 300 ಅಡಿ ಆಳ ಕಂದಕಕ್ಕೆ ಕಾರು ಬಿದ್ದಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮಳೆಯ ನಡುವೆ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ಜಮ್ಮುವಿನ ಅಂಬ್ ಘೋರ್ತಾದ ಕಾರು ಚಾಲಕ ಬಲ್ವಾನ್ ಸಿಂಗ್ (47) ಮತ್ತು ಬಿಹಾರದ ಪಶ್ಚಿಮ ಚಂಪಾರಣ್‌ನ ವಿಪಿನ್ ಮುಖಿಯಾ ಭೈರ್‌ಗಂಗ್ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಮತ್ತು ಉಧಮ್‌ಪುರ ಸಂಸದ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ, ''ಪೊಲೀಸ್ ಸಿಬ್ಬಂದಿ, ಎಸ್‌ಡಿಆರ್‌ಎಫ್ ಮತ್ತು ನಾಗರಿಕ ಕ್ಷಿಪ್ರ ಸ್ಪಂದನಾ ತಂಡಗಳು ಸ್ಥಳದಲ್ಲಿವೆ. ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪಗಳು. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ" ಎಂದಿದ್ದಾರೆ.
ಇತ್ತೀಚಿನ ಅಪಘಾತ ಪ್ರಕರಣ: ಮಾರ್ಚ್ 4ರಂದು ಕೂಡ ಇದೇ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 4 ಜನ ಸಾವನ್ನಪ್ಪಿದ್ದರು. ವಾಹನ ರಸ್ತೆಯಿಂದ ಉರುಳಿ ಕೆಳಗಿರುವ ಕಂದಕಕ್ಕೆ ಬಿದ್ದಿದ್ದರಿಂದ ಅಪಘಾತ ಸಂಭವಿಸಿತ್ತು.
ಕಳೆದ ವರ್ಷ ನವೆಂಬರ್ 15ರಂದು ದೋಡಾ ಜಿಲ್ಲೆಯಲ್ಲಿ ಬಸ್ವೊಂದು ಆಳ ಕಂದಕಕ್ಕೆ ಬಿದ್ದು 39 ಪ್ರಯಾಣಿಕರು ಸಾವನ್ನಪ್ಪಿದ್ದರು. 17 ಮಂದಿ ಗಾಯಗೊಂಡಿದ್ದರು.