ತಿರುವನಂತಪುರಂ(ಕೇರಳ): ಸೇವಾ ನಿಯಮ ಉಲ್ಲಂಘಿಸಿದ ಆರೋಪದಡಿ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಕೆ.ಗೋಪಾಲಕೃಷ್ಣನ್ ಮತ್ತು ಎನ್.ಪ್ರಶಾಂತ್ ಅಮಾನತಾದ ಅಧಿಕಾರಿಗಳು.
ಅಮಾನತು ಮಾಡಿದ್ದೇಕೆ?: ಧರ್ಮದ ಆಧಾರದ ಮೇಲೆ ಸರ್ಕಾರಿ ಅಧಿಕಾರಿಗಳ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ ಆರೋಪದ ಮೇಲೆ ಗೋಪಾಲಕೃಷ್ಣ ಅವರನ್ನೂ, ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಐಎಎಸ್ ಅಧಿಕಾರಿಯನ್ನು ಸಾರ್ವಜನಿಕವಾಗಿ ಟೀಕಿಸಿದ ಆರೋಪದಡಿ ಪ್ರಶಾಂತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ ತಡರಾತ್ರಿ ಈ ಅಮಾನತು ಆದೇಶ ಹೊರಡಿಸಲಾಗಿದೆ. ಅಖಿಲ ಭಾರತ ಸೇವಾ ನಿಯಮ 1968ರ ಹಲವು ಸೆಕ್ಷನ್‌ಗಳಡಿ ಇಬ್ಬರು ಅಧಿಕಾರಿಗಳು ಅಶಿಸ್ತು ತೋರಿ, ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಸರ್ಕಾರ ತಿಳಿಸಿದೆ.
ನನ್ನ ಫೋನ್ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿರುವ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿದ್ದ ಗೋಪಾಲಕೃಷ್ಣ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಆದರೆ ತನಿಖೆಯಲ್ಲಿ ಗೋಪಾಲಕೃಷ್ಣ ಅವರ ಮೊಬೈಲ್ ಫೋನ್ ಹ್ಯಾಕ್ ಆಗಿರುವ ಕುರಿತು ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸರದ ಮುರುಳೀಧರನ್ ಅಮಾನತು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆಗೆ ಮುನ್ನ ಅಧಿಕಾರಿಯೇ ಸ್ವತಃ ಅನೇಕ ಬಾರಿ ಮೊಬೈಲ್ ಫೋನ್ ರಿಸೆಟ್ ಮಾಡಿರುವುದು ಕಂಡುಬಂದಿದೆ. ವಾಟ್ಸ್‌ಆ್ಯಪ್ ಗ್ರೂಪ್ ರಚಿಸುವ ಮೂಲಕ ರಾಜ್ಯದ ಅಖಿಲ ಭಾರತ ಸೇವೆಗಳ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ಒಗ್ಗಟ್ಟು ಮುರಿಯುವ ದುರುದ್ದೇಶವನ್ನು ಗೋಪಾಲಕೃಷ್ಣ ಹೊಂದಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೃಷಿ ಇಲಾಖೆ ವಿಶೇಷ ಕಾರ್ಯದರ್ಶಿ ಎನ್.ಪ್ರಶಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಣಕಾಸು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ.ಜಯತಿಲಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಕೇರಳ ಐಎಎಸ್ ಅಧಿಕಾರಿಗಳಿರುವ ವಾಟ್ಸ್ಆ್ಯಪ್ ಗ್ರೂಪ್ ರಚನೆ: ವಿವಾದ