ನವದೆಹಲಿ: ಅನಾರೋಗ್ಯ ಹಿನ್ನೆಲೆ ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಮಂಗಳವಾರವಷ್ಟೇ ನಿರಾಕರಿಸಿದ್ದ ಸುಪ್ರೀಂಕೋರ್ಟ್ ಬುಧವಾರ ಅದನ್ನು ವಜಾ ಮಾಡಿದೆ.
ದೆಹಲಿ ಮದ್ಯ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಮೇ 10 ರಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ನೀಡಲಾದ ಅವಧಿಯು ಮುಗಿದಿದ್ದು, ಜೂನ್ 2 ರಂದು ಮತ್ತೆ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕಿದೆ.
ಆದರೆ, ತಮಗೆ ಗಂಭೀರ ಅನಾರೋಗ್ಯ ಸಮಸ್ಯೆಗಳಿದ್ದು, ಅವುಗಳಿಗೆ ಚಿಕಿತ್ಸೆ ಪಡೆಯಬೇಕಿದೆ. ಒಂದು ವಾರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಮಂಗಳವಾರ ನಡೆದ ವಾದದಲ್ಲಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೇಜ್ರಿವಾಲ್ ಅವರ ಪರ ವಕೀಲರು ಕೋರಿದ್ದರು. ಆದರೆ, ಇದನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ. ಇಂದು ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿದ್ದು, ಅವಧಿ ವಿಸ್ತರಿಸಲು ನಿರಾಕರಿಸಿ ಅರ್ಜಿಯನ್ನು ವಜಾ ಮಾಡಿದ್ದಾರೆ.
ಅರ್ಜಿಯಲ್ಲಿ ಏನಿತ್ತು?: ಬಂಧನದ ನಂತರ ತೂಕ 7 ಕೆಜಿ ಕಡಿಮೆಯಾಗಿದೆ. ಕೀಟೋನ್ ಮಟ್ಟವೂ ತುಂಬಾ ಹೆಚ್ಚಾಗಿದೆ. ಇದು ಕೆಲವು ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. PET-CT ಸ್ಕ್ಯಾನ್ ಮತ್ತು ಹಲವಾರು ಪರೀಕ್ಷೆಗಳಿಗೆ ಒಳಗಾಗುವ ಅಗತ್ಯವನ್ನು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜಾಮೀನು ಅವಧಿಯನ್ನು 7 ದಿನಗಳ ಕಾಲ ವಿಸ್ತರಿಸಿ ಎಂದು ಅರವಿಂದ್ ಕೇಜ್ರಿವಾಲ್ ಅವರು ಕೋರಿದ್ದರು.
ಜೂನ್ 2 ರಂದು ಶರಣಾಗತಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದಲ್ಲಿ ಬಂಧಿತರಾದ 50 ದಿನಗಳ ಬಳಿಕ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಜೂನ್ 1ಕ್ಕೆ ಅದರ ಅವಧಿ ಮುಗಿಯಲಿದೆ. ಜೂನ್ 2 ಮಧ್ಯಾಹ್ನದ ಒಳಗೆ ಅವರು ತಿಹಾರ್ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಸುಪ್ರೀಂಕೋರ್ಟ್ ಷರತ್ತು ವಿಧಿಸಿದೆ.
ಚುನಾವಣಾ ಫಲಿತಾಂಶಕ್ಕೂ ಮೊದಲು ಮತ್ತೆ ಜೈಲಿಗೆ: ಜೂನ್ 1 ರಂದು ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದಕ್ಕೂ ಮೊದಲು ದೆಹಲಿ ಸಿಎಂ ಮತ್ತೆ ತಿಹಾರ್ ಜೈಲು ಪಾಲಾಗಲಿದ್ದಾರೆ. ಸದ್ಯ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಪಂಜಾಬ್ನಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಮೇ 30 ರ ರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.